ರಾಷ್ಟ್ರೀಯ

ಟಾಟಾ ಸನ್ಸ್ ಹುದ್ದೆಗೆ ಮರು ನೇಮಕ ಆಸಕ್ತಿ ಇಲ್ಲ: ಸೈರಸ್ ಮಿಸ್ತ್ರಿ

Pinterest LinkedIn Tumblr


ನವದೆಹಲಿ: ಪದಚ್ಯುತ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯ(ಎನ್‌ಸಿಎಲ್‌ಎಟಿ) ಆದೇಶ ನೀಡಿದೆ. ಈ ಆದೇಶದ ವಿರುದ್ಧ ಟಾಟಾ ಸನ್ಸ್ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.

ಈ ಮಧ್ಯೆ, ತಾವು ಮತ್ತೆ ಟಾಟಾ ಅಧ್ಯಕ್ಷರಾಗಿ ಅಥವಾ ಟಾಟಾ ಗ್ರೂಪ್ ನ ನಿರ್ದೇಶಕರಾಗುವ ಬಗ್ಗೆ ನನಗೆ ಯಾವುದೇ ಆಸಕ್ತಿ ಇಲ್ಲ. ಆದರೆ ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಹಕ್ಕುಗಳನ್ನು ರಕ್ಷಿಸಲು ನಾನು ಕಾನೂನು ಹೋರಾಟ ಆಯ್ಕೆ ಮಾಡಿಕೊಳ್ಳಬೇಕಾಯಿತು ಎಂದು ಸೈರಸ್ ಮಿಸ್ತ್ರಿ ಅವರು ಹೇಳಿದ್ದಾರೆ.

ಟಾಟಾ ಸಮೂಹದ ಹಿತಾಸಕ್ತಿಗಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅವರಿಗೆ ಯಾವುದೇ ವ್ಯಕ್ತಿಯ ಹಿತಾಸಕ್ತಿಗಳಿಗಿಂತ ತಮ್ಮ ಹಿತಾಸಕ್ತಿಯೇ ಹೆಚ್ಚು ಮುಖ್ಯವಾಗಿದೆ ಎಂದಿದ್ದಾರೆ.

ನನ್ನ ವಿರುದ್ಧದ ಅಪಪ್ರಚಾರವನ್ನು ಹೋಗಲಾಡಿಸಲು ನಾನು ಕಾನೂನು ಹೋರಾಟ ನಡೆಸಿದೆ. ಈಗ ಎನ್‌ಸಿಎಲ್‌ಎಟಿ ಆದೇಶದ ಹೊರತಾಗಿಯೂ ನಾನು ಟಾಟಾ ಸನ್ಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನ ಅಥವಾ ಕಂಪನಿಯ ಯಾವುದೇ ನಿರ್ದೇಶಕ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ ಎಂದು ಸೈರಸ್ ಮಿಸ್ತ್ರಿ ಸ್ಪಷ್ಟಪಡಿಸಿದ್ದಾರೆ.

ದೇಶದ ಅತ್ಯಂತ ಹಳೆಯ ಕಂಪನಿಗಳಲ್ಲಿ ಒಂದಾದ ಟಾಟಾ ಸನ್ಸ್‌ನ ಕಾರ್ಯಕಾರಿ ಅಧ್ಯಕ್ಷ ಹುದ್ದೆಗೆ ಸೈರಸ್‌ ಮಿಸ್ತ್ರಿಯನ್ನು ಮರು ನೇಮಕ ಮಾಡಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಡಿಸೆಂಬರ್‌ 18ರಂದು ಆದೇಶ ನೀಡಿತ್ತು.

ಇದಕ್ಕೂ ಮೂರು ವರ್ಷ ಮೊದಲು ಅಂದರೆ 2016ರ ಅಕ್ಟೋಬರ್‌ನಲ್ಲಿ ನಾಟಕೀಯ ಬೆಳವಣಿಯೊಂದರಲ್ಲಿ ಸೈರಸ್‌ ಮಿಸ್ತ್ರಿಯನ್ನು ಟಾಟಾ ಗ್ರೂಪ್‌ನ ಆಡಳಿತ ಮಂಡಳಿಯಿಂದ ಹೊರ ಹಾಕಲಾಗಿತ್ತು. ನಂತರ ರತನ್‌ ಟಾಟಾ ಮತ್ತೆ ಟಾಟಾ ಸಂಸ್ಥೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಬಳಿಕ ಡಿಸೆಂಬರ್‌ನಲ್ಲಿ ಟಾಟಾ ಸಂಸ್ಥೆಗಳ ಎಲ್ಲಾ ನಿರ್ದೇಶಕ ಹುದ್ದೆಗಳಿಗೂ ಮಿಸ್ತ್ರಿ ರಾಜೀನಾಮೆ ನೀಡಿ ಕಂಪನಿ ನ್ಯಾಯಮಂಡಳಿ ಮೊರೆ ಹೋಗಿದ್ದರು.

Comments are closed.