ರಾಷ್ಟ್ರೀಯ

ಹೈದರಾಬಾದಿನಲ್ಲಿ ಎನ್ಕೌಂಟರ್ ಮಾಡಿದ ರೀತಿಯಲ್ಲೇ ನಮಗೂ ನ್ಯಾಯ ಒದಗಿಸಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆ ಆಗ್ರಹ

Pinterest LinkedIn Tumblr

ನವ ದೆಹಲಿ: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿದ ಕೀಚಕರ ಸಂಹಾರದಂತೆಯೇ ನನ್ನ ಮಗಳ ಮೇಲೆ ಅಟ್ಟಹಾಸ ಮೆರೆದ ಕಾಮುಕರನ್ನೂ ಸಂಹಾರ ಮಾಡಿ ಎಂದು ಉನ್ನಾವೋ ಅತ್ಯಾಚಾರ ಸಂತ್ರಸ್ತೆ ತಂದೆ ಆಗ್ರಹಿಸಿದ್ದಾರೆ.

2017ರಲ್ಲಿ ಉತ್ತರಪ್ರದೇಶದ ಉನ್ನಾವೋ ಎಂಬಲ್ಲಿ ಬಿಜೆಪಿ ಪಕ್ಷದ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದರು. ಈ ಪ್ರಕರಣ ದಾಖಲಾಗಿ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮೇಲೆ ಮೂರು ಬಾರಿ ಕೊಲೆ ಯತ್ನ ನಡೆಸಲಾಗಿತ್ತು.

ಆಕೆ ಕೋರ್ಟ್​ಗೆ ತೆರಳುತ್ತಿದ್ದಾಗ ಉದ್ದೇಶಪೂರ್ವಕವಾಗಿ ಅಪಘಾತ ನಡೆಸಲಾಗಿತ್ತು. ಈ ಅಪಘಾತದಲ್ಲಿ ಸಂತ್ರಸ್ತೆ ಬದುಕುಳಿದಿದ್ದರೂ, ಆಕೆಯ ಚಿಕ್ಕಮ್ಮ ಹಾಗೂ ಮತ್ತೊಬ್ಬರು ಸಂಬಂಧಿ ಮೃತಪಟ್ಟಿದ್ದರು.

ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಸ್ವತಃ ಈ ಪ್ರಕರಣವನ್ನು ದೆಹಲಿ ಹೈಕೋರ್ಟ್​ಗೆ ವರ್ಗಾಯಿಸಿ ಆದೇಶಿಸಿತ್ತು. ಅಲ್ಲದೆ, ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ತಾಕೀತು ಮಾಡಿತ್ತು.

ಇದೇ ಪ್ರಕರಣದ ಸಂಬಂಧ ಆಕೆ ಗುರುವಾರ ಬರೇಲಿಗೆ ತೆರಳುತ್ತಿದ್ದ ವೇಳೆ ಕೋರ್ಟ್ ಆವರಣದಲ್ಲೇ ಅತ್ಯಾಚಾರ ಆರೋಪಿಗಳು ಆಕೆಯ ಮೇಲೆ ಮತ್ತೆ ದಾಳಿ ಮಾಡಿದ್ದಾರೆ. ಪೆಟ್ರೋಲ್ ಸುರಿದು ಸಜೀವವಾಗಿ ದಹಿಸಿದ್ದಾರೆ. ಶೇ.70ರಷ್ಟು ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ಥೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಆ ದಿನ ರಾತ್ರಿಯೇ ಮೃತಪಟ್ಟಿದ್ದಾಳೆ.

ಈ ಪ್ರಕರಣ ಇದೀಗ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಹಾಗೂ ಜನಾಕ್ರೋಶಕ್ಕೆ ಕಾರಣವಾಗಿದೆ. ಹೈದರಾಬಾದ್ ಅತ್ಯಾಚಾರಿಗಳ ಎನ್​ಕೌಂಟರ್ ಬೆನ್ನಿಗೆ ಬೆಳಕಿಗೆ ಬಂದಿರುವ ಈ ಘಟನೆ ಇದೇ ಕಾರಣಕ್ಕೆ ಇದೀಗ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೃತ ಸಂತ್ರಸ್ತೆಯ ತಂದೆ, “ನಾನು ನನ್ನ ಮಗಳನ್ನು ಕಳೆದುಕೊಂಡೆ. ಆಕೆಯ ಸಾವಿನ ಹಿಂದಿರುವ ಐದೂ ಜನ ಆರೋಪಿಗಳನ್ನು ಹೈದರಾಬಾದ್ ಪ್ರಕರಣದಂತೆಯೇ ಪೊಲೀಸರು ಹೊಡೆದು ಉರುಳಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಮೃತಳ ಅಣ್ಣನೂ ಇದೇ ರೀತಿಯ ಒತ್ತಾಯವನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಆದರೆ, ಈ ಪ್ರಕರಣದ ಬೆನ್ನಿಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಉನ್ನಾವೋ ಸಂತ್ರಸ್ತೆಯ ಸಾವಿಗೆ ಕಾರಣವಾದ ಎಲ್ಲರಿಗೂ ಕಠಿಣ ಶಿಕ್ಷೆ ನೀಡುವ ಕುರಿತು ಭರವಸೆ ನೀಡಿದ್ದಾರೆ.

Comments are closed.