ಹೈದರಾಬಾದ್/ನವದೆಹಲಿ: ಪಶುವೈದ್ಯೆ ದಿಶಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ನಾಲ್ವರು ಆರೋಪಿಗಳನ್ನು ಶುಕ್ರವಾರ ಮುಂಜಾನೆ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆಗೆ ಹೈದರಾಬಾದ್ ನಲ್ಲಿ ಸ್ಥಳೀಯರು ಹೂವಿನ ಮಳೆ ಸುರಿಸಿ ಅಭಿನಂದಿಸಿದ್ದಾರೆ. ಪೊಲೀಸರ ಎನ್ ಕೌಂಟರ್ ಕುರಿತು ಇದೀಗ ಪರ-ವಿರೋಧದ ಚರ್ಚೆ ತೀವ್ರಗೊಂಡಿದೆ.
ದಿಶಾ ಪ್ರಕರಣದ ನಾಲ್ವರು ಆರೋಪಿಗಳ ಎನ್ ಕೌಂಟರ್ ಪ್ರಕರಣದ ಬಗ್ಗೆ ತೆಲಂಗಾಣದ ಮುಖ್ಯಕಾರ್ಯದರ್ಶಿಯಿಂದ ಕೇಂದ್ರ ಗೃಹ ಸಚಿವಾಲಯ ವಿವರಣೆ ಕೇಳಿರುವುದಾಗಿ ವರದಿ ತಿಳಿಸಿದೆ.
ಮನೇಕಾ ಗಾಂಧಿ, ಶಶಿ ತರೂರ್ ಆಕ್ರೋಶ:
ತೆಲಂಗಾಣದಲ್ಲಿ ಇಂದು ಮುಂಜಾನೆ ನಡೆದ ಘಟನೆ ಭಯಂಕರವಾದದ್ದು, ನಿಮಗೆ ಬೇಕಾದಂತೆ ಜನರನ್ನು(ಆರೋಪಿ) ನೀವು (ಪೊಲೀಸರು) ಕೊಲ್ಲುವಂತಿಲ್ಲ ಎಂದು ಮಾಜಿ ಸಚಿವೆ, ಬಿಜೆಪಿ ಸಂಸದೆ ಮನೇಕಾ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ. ಆರೋಪಿಗಳನ್ನು ನ್ಯಾಯಾಲಯವೇ ಗಲ್ಲಿಗೇರಿಸುವ ಶಿಕ್ಷೆ ನೀಡುತ್ತದೆ ಎಂದು ಗಾಂಧಿ ಈ ಸಂದರ್ಭದಲ್ಲಿ ಹೇಳಿದರು.
ನ್ಯಾಯ ಹೊರತುಪಡಿಸಿ ಹತ್ಯೆಗೈಯುವುದನ್ನು ಒಪ್ಪಲು ಸಾಧ್ಯವಿಲ್ಲ: ತರೂರ್
ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ನ್ಯಾಯ ಹೊರತುಪಡಿಸಿ ಹತ್ಯೆಗೈಯುವುದನ್ನು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ಹೆಚ್ಚಿನ ವಿವರಣೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ಆರೋಪಿಗಳು ಶಸ್ತ್ರಾಸ್ತ್ರ ಹೊಂದಿದ್ದರೆ, ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಶೂಟೌಟ್ ಮಾಡುವುದನ್ನು ಸಮರ್ಥಿಸಿಕೊಳ್ಳಬಹುದು. ಆದರೆ ವಿವರಣೆ ತಿಳಿಯುವವರೆಗೆ ನಾವು ಘಟನೆಯನ್ನು ಖಂಡಿಸುವುದು ಸರಿಯಲ್ಲ ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಕಾನೂನು ಚೌಕಟ್ಟು ಮುಖ್ಯ; ರಾಷ್ಟ್ರೀಯ ಮಹಿಳಾ ಆಯೋಗ:
ಆರೋಪಿಗಳನ್ನು ಕಾನೂನು ವ್ಯವಸ್ಥೆಯ ಮೂಲಕವೇ ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ತಿಳಿಸಿದ್ದಾರೆ.
ಮಾಯಾವತಿ ಬಹುಪರಾಕ್:
ತೆಲಂಗಾಣ ಪೊಲೀಸರ ಕೆಲಸಕ್ಕೆ ಬಹುಜನ್ ಸಮಾಜ್ ಪಕ್ಷದ ಮುಖ್ಯಸ್ಥೆ ಮಾಯಾವತಿ ಶ್ಲಾಘಿಸಿದ್ದು, ಉತ್ತರಪ್ರದೇಶ ಸರ್ಕಾರದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡುವಲ್ಲಿ ಯೋಗಿ ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಉಮಾ ಭಾರತಿ ಶ್ಲಾಘನೆ:
ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಸರಣಿ ಟ್ವೀಟ್ ಮಾಡಿದ್ದು, ತೆಲಂಗಾಣದ ಎಲ್ಲಾ ಪೊಲೀಸರು ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇತರ ರಾಜ್ಯಗಳಲ್ಲಿಯೂ ಆಡಳಿತ ನಡೆಸುವ ಜನರನ್ನು ನಂಬುವಂತೆ ಮಾಡಿದೆ, ಕ್ರಿಮಿನಲ್ ಗಳಿಗೆ ತಕ್ಷಣವೇ ಪಾಠ ಕಲಿಸುವ ದಾರಿಯನ್ನು ಕಂಡುಕೊಂಡಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.
ಸಂಸತ್ ನಲ್ಲೂ ಪ್ರತಿಧ್ವನಿಸಿದ ಎನ್ ಕೌಂಟರ್, ರಿವಾಲ್ವರ್ ಶೋ ಪೀಸ್ ಅಲ್ಲ:
ಸಾಮೂಹಿಕ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆ ಇಂದು ಸಂಸತ್ ನಲ್ಲಿಯೂ ಪ್ರತಿಧ್ವನಿಸಿತು. ತೆಲಂಗಾಣ ಪೊಲೀಸರ ಪರವಾಗಿ ಹಲವಾರು ಸಂಸದರು ಮಾತನಾಡಿದ್ದರು.
ಪೊಲೀಸರಿಗೆ ಆಯುಧ ನೀಡುವುದು ಶೋ ಪೀಸ್ ಗಾಗಿ ಅಲ್ಲ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಲೋಕಸಭೆ ಕಲಾಪದಲ್ಲಿನ ಚರ್ಚೆ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಸಂಸದ ಸುಗತೋ ರಾಯ್, ತೆಲಂಗಾಣದ ಎನ್ ಕೌಂಟರ್ ಅನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅತ್ಯಾಚಾರ ಪ್ರಕರಣದ ಬಗ್ಗೆ ಶೀಘ್ರ ನ್ಯಾಯ ದೊರಕಿಸಿಕೊಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಪ್ರತಿಕ್ರಿಯೆ ನೀಡಿದ್ದರು.
Comments are closed.