ರಾಷ್ಟ್ರೀಯ

ಟಿವಿ ಮತ್ತು ಮೊಬೈಲ್ ಗಳಿಂದ ಹೆಚ್ಚುತ್ತಿರುವ ಅತ್ಯಾಚಾರಗಳು: ಕಾಂಗ್ರೆಸ್ ಸಚಿವ

Pinterest LinkedIn Tumblr


ಜೈಪುರ: ಗಂಡಸರ ಲೈಂಗಿಕ ಬಯಕೆಗಳಿಗೆ ಸ್ತ್ರೀಯರು ಅಡ್ಡಿಪಡಿಸಬಾರದು ಆಗ ಮಾತ್ರ ಅತ್ಯಾಚಾರ ಸಂಬಂಧಿತ ಕೊಲೆಗಳು ನಡೆಯುವುದು ಈ ದೇಶದಲ್ಲಿ ಕಡಿಮೆಯಾಗಬಹುದು. ಮತ್ತು ವಯಸ್ಸಿಗೆ ಬಂದ ಹುಡುಗಿಯರು ಯಾವಾಗಲೂ ತಮ್ಮ ಜೊತೆಯಲ್ಲಿ ಕಾಂಡೋಮ್ ಗಳನ್ನು ಇರಿಸಿಕೊಂಡಿರಬೇಕು ಮತ್ತು ಅತ್ಯಾಚಾರಿಗಳಿಗೆ ಅವರ ಬಯಕೆ ತೀರಲು ಸಹಕರಿಸಬೇಕು ಎಂದು ಚಿತ್ರ ತಯಾರಕ ಡೇನಿಯಲ್ ಶ್ರವಣ್ ಎಂಬಾತ ವಿಕ್ಷಿಪ್ತ ಹೇಳಿಕೆ ನೀಡಿದ ಬೆನ್ನಲ್ಲೇ ಇಲ್ಲೊಬ್ಬ ಸಚಿವರು ಟಿವಿ ಮತ್ತು ಮೊಬೈಲ್ ಫೋನ್ ಗಳ ಅನ್ವೇಷಣೆಯು ಅತ್ಯಾಚಾರದಂತಹ ಅಪರಾಧಗಳನ್ನು ಹೆಚ್ಚು ಮಾಡಿದೆ ಎಂಬ ಹೇಳಿಕೆ ನೀಡಿದ್ದಾರೆ.

ರಾಜಸ್ಥಾನದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿರುವ ಭನ್ವರ್ಲಾಲ್ ಮೆಘ್ವಾಲ್ ಈ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೊಬೈಲ್ ಟಿವಿಗಳ ಮೂಲಕ ಇಂದಿನ ಯುವಜನತೆ ತಪ್ಪು ದಾರಿಯನ್ನು ಹಿಡಿಯುತ್ತಿದ್ದಾರೆ ಎಂದು ಮೆಘ್ವಾಲ್ ಹೇಳಿದ್ದಾರೆ.

ನ್ಯಾಯಾಲಯಗಳು ಅತ್ಯಾಚಾರ ಪ್ರಕರಣಗಳನ್ನು ಮೂರು ತಿಂಗಳೊಳಗೆ ಇತ್ಯರ್ಥಪಡಿಸಬೇಕು ಮತ್ತು ಅಪರಾಧಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದೂ ಸಹ ಸಚಿವ ಭನ್ವರ್ಲಾಲ್ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಹೈದರಾಬಾದ್ ನಲ್ಲಿ ಪಶುವೈದ್ಯೆಯ ಮೇಲೆ ನಾಲ್ವರು ಯುವಕರು ಅತ್ಯಾಚಾರ ನಡೆಸಿ ಬಳಿಕ ಆಕೆಯನ್ನು ಉಸಿರುಗಟ್ಟಿಸಿ ಕೊಂದು ಆಕೆಯ ದೇಹವನ್ನು ಸುಟ್ಟುಹಾಕಿದ ಬೀಭತ್ಸ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಈ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಚಿವರಿಂದ ಈ ಹೇಳಿಕೆ ಹೊರಬಿದ್ದಿದೆ.

ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆದಾಗ ರಾಜಕಾರಣಿಗಳು ಮತ್ತು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ತಲೆಗೊಂದರಂತೆ ತರಲೆ ಸಲಹೆಗಳನ್ನು ಮತ್ತು ಅಭಿಪ್ರಾಯಗಳನನ್ನು ನೀಡುವುದು ಹೊಸತೇನಲ್ಲ.

ಈ ಹಿಂದೆ 2012ರಲ್ಲಿ ರಾಷ್ಟ್ರರಾಜಧಾನಿಯಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣ ನಡೆದಿದ್ದ ಸಂದರ್ಭದಲ್ಲಿ ಹರ್ಯಾಣದ ಖಾಪ್ ನಾಯಕರೊಬ್ಬರು ಚೈನೀಸ್ ಫಾಸ್ಟ್ ಫುಡ್ ಗಳಿಂದಲೇ ಅತ್ಯಾಚಾರದಂತಹ ಘಟನೆಗಳು ನಡೆಯುತ್ತವೆ ಎಂದು ಹೇಳಿಕೆ ನೀಡಿದ್ದರು. ಇನ್ನು 2015ರಲ್ಲಿ ಒಂದು ಹೇಳಿಕೆ ನೀಡಿದ್ದ ಬಿಹಾರದ ಅಂದಿನ ಸಚಿವರೊಬ್ಬರು ಮೊಬೈಲ್ ಫೋನ್ ಗಳು ಹಾಗೂ ಮಾಂಸಾಹಾರ ಸೇವನೆ ಅತ್ಯಾಚಾರಕ್ಕೆ ಪ್ರೇರಣೆ ಎಂದು ಹೇಳಿದ್ದು ಆ ಸಂದರ್ಭದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿತ್ತು.

ಇನ್ನು 2014ರಲ್ಲಿ ಅಂದಿನ ಮಧ್ಯಪ್ರದೇಶದ ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದ ಬಾಬುಲಾಲ್ ಗೌರ್ ಅವರು ಅತ್ಯಾಚಾರದಂತಹ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗಲು ಬಾಲಿವುಡ್ ಸಿನೇಮಾಗಳೇ ಪ್ರೇರಣೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು ಮಾತ್ರವಲ್ಲದೇ ಮಹಿಳೆಯರ ಒಪ್ಪಿಗೆಯ ಮೇಲೆಯೇ ಅವರನ್ನು ಅತ್ಯಾಚಾರ ಮಾಡಲಾಗುತ್ತದೆ ಎಂಬರ್ಥದ ಹೆಳಿಕೆಯನ್ನೂ ಗೌರ್ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಮಹಿಳೆಯರು ಜೀನ್ಸ್ ಪ್ಯಾಂಟ್ ತೊಡುವುದೇ ಅತ್ಯಾಚರಕ್ಕೆ ಕಾರಣ ಎಂಬ ಹೇಳಿಕೆಯನ್ನು ಇದೇ ಬಾಬುಲಾಲ್ ಗೌರ್ 2013ರಲ್ಲಿ ನೀಡಿದ್ದರು.

ಒಟ್ಟಿನಲ್ಲಿ ಅತ್ಯಾಚಾರದಂತಹ ಗಂಭೀರ ಪ್ರಕರಣಗಳು ನಡೆದ ಬಳಿಕ ಜನ ಸಾಮಾನ್ಯರಲ್ಲಿ ತಮ್ಮ ಭದ್ರತೆಯ ಕುರಿತಾಗಿ ಹಲವು ಪ್ರಶ್ನೆಗಳು ಮೂಡಿದರೆ ರಾಜಕಾರಣಿಗಳು ಮತ್ತು ಸಮಾಜದಲ್ಲಿ ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಕೆಲವು ವ್ಯಕ್ತಿಗಳು ಮಾತ್ರ ಸಂವೇದನಾರಹಿತ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಕ್ಕೀಡಾಗುತ್ತಿರುತ್ತಾರೆ.

Comments are closed.