ರಾಷ್ಟ್ರೀಯ

ಕಿವಿಯೋಲೆಗಾಗಿ 4ರ ಬಾಲಕಿ ಜೀವ ತೆಗೆದ ಇಬ್ಬರು ಮಹಿಳೆಯರು

Pinterest LinkedIn Tumblr


ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಒಂದು ಜೊತೆ ಬಂಗಾರದ ಕಿವಿಯೋಲೆಗಾಗಿ ನೆರೆಮನೆಯ ಇಬ್ಬರು ಮಹಿಳೆಯರು 4 ವರ್ಷದ ಬಾಲಕಿ ಜೀವವನ್ನೇ ತೆಗೆದಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯ ಖಾರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 4 ವರ್ಷದ ಬಾಲಕಿ ತನ್ನ ಕುಟುಂಬಸ್ಥರೊಂದಿಗೆ ಖಾರ್‍ಗ್ರಾಮದಲ್ಲಿ ವಾಸಿಸುತ್ತಿದ್ದಳು. ಬಾಲಕಿಯ ನೆರೆಮನೆಯಲ್ಲಿದ್ದ ಇಬ್ಬರು ಮಹಿಳೆಯರು ಆಕೆಯ ಮನೆಯವರು ಜೊತೆ ಒಳ್ಳೆಯ ಸ್ನೇಹ ಬೆಳೆಸಿದ್ದರು. ಆದರೆ ಬಾಲಕಿ ಕಿವಿಯಲ್ಲಿದ್ದ ಬಂಗಾರ ಓಲೆ ಮೇಲೆ ಮಹಿಳೆಯರಿಗೆ ಕಣ್ಣಿತ್ತು. ಹೀಗಾಗಿ ಬಂಗಾರದ ಆಸೆ ಪುಟ್ಟ ಜೀವವನ್ನೇ ಮಹಿಳೆಯರು ಬಲಿ ಪಡೆದಿದ್ದಾರೆ.

ಮಂಗಳವಾರ ಬಾಲಕಿ ಮನೆಯಿಂದ ಕಾಣೆಯಾಗಿದ್ದಳು. ಈ ಬಗ್ಗೆ ಪೋಷಕರು ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ಆದರೆ ಬುಧವಾರ ರಕ್ತದ ಮಡುವಿನಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಆರೋಪಿ ಮಹಿಳೆಯರು ಸಿಕ್ಕಿಬಿದ್ದಾರೆ. ಮಹಿಳೆಯರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಬಾಲಕಿ ಕಿವಿಯಲ್ಲಿದ್ದ ಬಂಗಾರದ ಓಲೆಗಾಗಿ ಆಕೆಯನ್ನು ಕೊಲೆ ಮಾಡಿದೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ಬೇರೆ ಯಾರು ಭಾಗಿಯಾಗಿಲ್ಲ, ಕೇವಲ ಕಿವಿಯೋಲೆಗಾಗಿ ನಾವು ಕೊಲೆ ಮಾಡಿದ್ದೇವೆ ಎಂದು ಮಹಿಳೆಯರು ಹೇಳಿದ್ದಾರೆ.

ಸದ್ಯ ಈ ಸಂಬಂಧ ಪೊಲೀಸರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದು, ಬುಧವಾರವೇ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆರೋಪಿಗಳನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.

Comments are closed.