
ಶಬರಿಮಲೆ,(ನ. 26): ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಪಕ್ಕದ ರಾಜ್ಯ ತಮಿಳುನಾಡಿನಿಂದ ಆಗಮಿಸಿದ್ದ ಭಕ್ತನೊಬ್ಬ ಮಾರ್ಗ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾದೇಶ್ವರನ್(29) ಮೃತಪಟ್ಟ ಭಕ್ತ. ಶಬರಿಮಲೆ ದೇವಾಲಯ ತಲುಪುವ ಮಾರ್ಗ ಮಧ್ಯೆ ಸಿಗುವ ಪವಿತ್ರ ನೀಲಿಮಲೆ ಬೆಟ್ಟವನ್ನು ಏರುವಾಗ ಅವರ ಆರೋಗ್ಯದಲ್ಲಿ ಏರುಪೇರಾಯಿತು. ಕೂಡಲೇ ಸನ್ನಿಧಾನಂ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಷ್ಟರಲ್ಲಾಗಲೇ ಆ ಭಕ್ತ ಮೃತಪಟ್ಟಿದ್ದ ಎಂದು ಪೊಲೀಸರು ಹೇಳಿದರು.
ಯುವ ಭಕ್ತನ ಸಾವಿಗೆ ಹೃದಯಾಘಾತ ಕಾರಣವೇ ಎಂಬ ಶಂಕೆ ಇದೆ. ಹೀಗಾಗಿ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ಏನೆಂಬುದು ಖಚಿತವಾಗಲಿದೆ.
ಇತ್ತ ಜೆಡಿಎಸ್, ಅತ್ತ ಶಿವಸೇನಾ; ಅಂದು ಬಿಎಸ್ವೈ, ಇಂದು ಫಡ್ನವಿಸ್: ಕಾಂಗ್ರೆಸ್ಗೆ ‘ಮಹಾ’ ಗೆಲುವು
ಮತ್ತೊಂದು ಪ್ರತ್ಯೇಕ ದುರಂತ ಘಟನೆ ನಡೆದಿದೆ. ಮರಕೂಟಂ-ಚಂದ್ರನಂದನ ಮಾರ್ಗದಲ್ಲಿ ಭಕ್ತರು ಹೋಗುತ್ತಿದ್ದ ವೇಳೆ ಮರವೊಂದು ಬಿದ್ದಿದೆ. ಈ ಘಟನೆಯಲ್ಲಿ 11 ಮಂದಿ ಅಯ್ಯಪ್ಪಸ್ವಾಮಿ ಭಕ್ತರು ಗಾಯಗೊಂಡಿದ್ದಾರೆ. ಅವರಲ್ಲಿ 6 ಜನರ ಸ್ಥಿತಿ ತೀವ್ರ ಗಂಭೀರವಾಗಿದೆ. ಈ ಘಟನೆ ಮಧ್ಯರಾತ್ರಿ 2 ಗಂಟೆಯಲ್ಲಿ ಸಂಭವಿಸಿದೆ.
ಯಾತ್ರಾರ್ಥಿಗಳು ದರ್ಶನ ಪಡೆದು ಹಿಂದಿರುಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಘಟನೆಯಿಂದ ಎಲೆಕ್ಟ್ರಿಕ್ ಮತ್ತು ಟೆಲಿಫೋನ್ ಸಂಪರ್ಕ ಸ್ಥಗಿತಗೊಂಡಿತ್ತು.
ಎನ್ಡಿಆರ್ಎಫ್ ಮತ್ತು ತುರ್ತು ಕಾರ್ಯಾಚರಣೆ ಸಿಬ್ಬಂದಿಯ ಸಹಾಯದಿಂದ ರಸ್ತೆಗೆ ಉರುಳಿ ಬಿದ್ದ ಮರವನ್ನು ತೆರವುಗೊಳಿಸಲಾಯಿತು. ಗಾಯಾಳುಗಳನ್ನು ಪಂಬಾ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಗಂಭೀರಗೊಂಡಿರುವ 6 ಮಂದಿಯನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಬರಿಮಲೆ ದೇಗುಲದಲ್ಲಿ ವರ್ಷಕ್ಕೊಮ್ಮೆ ನಡೆಯುವ ಮಂಡಲಂ-ಮಕರವಿಲಕ್ಕು ಪೂಜೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಕೇರಳ ಮಾತ್ರವಲ್ಲದೇ, ಪಕ್ಕದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕದ ಲಕ್ಷಾಂತರ ಭಕ್ತರು ಅಯ್ಯಪ್ಪಸ್ವಾಮಿ ದರ್ಶನ ಪಡೆಯುತ್ತಿದ್ದಾರೆ.
Comments are closed.