
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೆಹಲಿ ಪೊಲೀಸರ ಕಾರ್ಯಾಚರಣೆಯಿಂದಾಗಿ ಸುಧಾರಿತ ಸ್ಫೋಟಕ ವಸ್ತು(ಐಇಡಿ)ವಿನ ಜತೆಗೆ ಮೂವರು ಉಗ್ರರನ್ನು ಅಸ್ಸಾಂನಲ್ಲಿ ಬಂಧಿಸುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದಂತಾಗಿದೆ ಎಂದು ವರದಿ ತಿಳಿಸಿದೆ.
ಬಂಧಿತರ ಬಳಿ ಇದ್ದ ನಿಷೇಧಿತ ಸಾಹಿತ್ಯ ಹಾಗೂ ಇನ್ನಿತರ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಐಸಿಸ್ ನಿಂದ ಪ್ರಭಾವಿರಾಗಿದ್ದು, ಅಸ್ಸಾಂನ ರಾಮ್ ಮೇಳದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಅಸ್ಸಾಂ ನಂತರ ದೆಹಲಿಯಲ್ಲಿ ದಾಳಿ ನಡೆಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆಂದು ವರದಿ ವಿವರಿಸಿದೆ.
ಈ ಘಟನೆಯನ್ನು ದೆಹಲಿ ಪೊಲೀಸ್ ಸ್ಪೆಷಲ್ ಸೆಲ್ ನ ಡಿಸಿಪಿ ಪ್ರಮೋದ್ ಕುಶ್ವಾಹಾ ಅವರು ಖಚಿತಪಡಿಸಿದ್ದು, ಐಇಡಿ ಸ್ಫೋಟಕದ ಜತೆ ಮೂವರು ಉಗ್ರರನ್ನು ಬಂಧಿಸಿದ್ದರಿಂದ ಉಗ್ರರ ದಾಳಿ ಸಂಚನ್ನು ವಿಫಲಗೊಳಿಸಿದಂತಾಗಿದೆ ಎಂದು ಎಎನ್ ಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಅಸ್ಸಾಂನ ಗೋಲಾಪಾರಾ ನಿವಾಸಿಗಳಾದ ರಂಜಿತ್ ಅಲಿ, ಇಸ್ಲಾಂ ಹಾಗೂ ಜಮಾಲ್ ಸೇರಿ ಮೂವರನ್ನು ಬಂಧಿಸಲಾಗಿದೆ. ಮೂವರು ದೆಹಲಿಯಲ್ಲಿ ಕೆಲವರ ಜತೆ ಸಂಪರ್ಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸಂಪರ್ಕ ಹೊಂದಿರುವ ಬಗ್ಗೆ ತನಿಖೆಯನ್ನು ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.