ರಾಷ್ಟ್ರೀಯ

ನಿತ್ಯಾನಂದನ ವಿರುದ್ಧ ದೂರು ದಾಖಲು, ಇಬ್ಬರು ಶಿಷ್ಯರ ಬಂಧನ

Pinterest LinkedIn Tumblr


ಅಹಮದಾಬಾದ್: ಮಕ್ಕಳನ್ನು ಅಪಹರಿಸಿದ ಹಾಗೂ ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ವಿರುದ್ಧ ಎಫ್ ಐಆರ್ ದಾಖಲಿಸಿರುವುದಾಗಿ ಗುಜರಾತ್ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ನಿತ್ಯಾನಂದನ ಇಬ್ಬರು ಶಿಷ್ಯರಾದ ಸಾಧ್ವಿ ಪ್ರಾಣಪ್ರಿಯಾನಂದ ಹಾಗೂ ಪ್ರಿಯಾತತ್ವ ರಿಧಿ ಕಿರಣ್ ಅವರನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.

ಕನಿಷ್ಠ ನಾಲ್ಕು ಮಕ್ಕಳನ್ನು ಅಪಹರಿಸಿ, ಅಕ್ರಮ ಬಂಧನದಲ್ಲಿಟ್ಟಿದ್ದಲ್ಲದೆ ಅವರನ್ನು ದೇಣಿಗೆ ಸಂಗ್ರಹಿಸಲು ಬಳಸಿಕೊಂಡ ಆರೋಪದ ಮೇಲೆ ನಿತ್ಯಾನಂದ ಹಾಗೂ ಆತನ ಶಿಷ್ಯರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಅಕ್ರಮ ಬಂಧನದಲ್ಲಿದ್ದ ನಾಲ್ವರು ಮಕ್ಕಳನ್ನು ಗುಜರಾತ್ ಪೊಲೀಸರು ರಕ್ಷಿಸಿದ್ದು, ಅವರಿಂದ ಹೇಳಿಕೆ ಪಡೆದ ನಂತರ ಸ್ವಯಂ ಘೋಷಿತ ದೇವಮಾನವನ ವಿರುದ್ಧ ಕೇಸ್ ದಾಖಲಿಸಲಾಗಿದೆ.

ನಿನ್ನೆಯಷ್ಟೇ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದು, ಅವರನ್ನು ರಕ್ಷಣೆ ಮಾಡಬೇಕೆಂದು ಕೋರಿ ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು.

2013ರಲ್ಲಿ 7 ವರ್ಷದಿಂದ 15 ವರ್ಷದವರೆಗಿನ ತಮ್ಮ ಮಕ್ಕಳನ್ನು ನಿತ್ಯಾನಂದ ಅವರು ನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದೆವು. ಆದರೆ, ಹೆಣ್ಣು ಮಕ್ಕಳು ಅಹಮದಾಬಾದ್’ನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ನಿತ್ಯಾನಂದನ ಧ್ಯಾನಪೀಠವಾಗಿರುವ ಯೋಗಿನಿ ಸರ್ವಜ್ಞಾನಪೀಠಂ ಎಂಬಲ್ಲಿಗೆ ವರ್ಗಾಯಿಸಲಾಗಿದೆ ಎಂದು ದೂರಿದ್ದರು.

Comments are closed.