ರಾಷ್ಟ್ರೀಯ

ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಯ ಕತ್ತು ಸೀಳಿದ!

Pinterest LinkedIn Tumblr


ಚೆನ್ನೈ: ಮದುವೆಯಾಗಲು ನಿರಾಕರಿಸಿದ 18 ವರ್ಷದ ಯುವತಿಯ ಕತ್ತು ಸೀಳಿ ಪೊಲೀಸರ ಅತಿಥಿಯಾದ ಘಟನೆ ತಮಿಳುನಾಡಿನ ಚಿದಂಬರಂ ಎಂಬಲ್ಲಿ ನಡೆದಿದೆ.

ಆರ್ ಸಕ್ತಿವೇಲ್ ಎಂಬಾತ ಧನಲಕ್ಷ್ಮಿಯನ್ನ ಕೊಲೆ ಮಾಡಲು ಯತ್ನಿಸಿದ್ದಾನೆ. ಬೇರೆ ಸಮುದಾಯವೆಂದು ಯುವತಿ ಸಕ್ತಿವೇಲ್ ಜೊತೆಗೆ ಮದುವೆಯಾಗಲು ಒಪ್ಪಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ಈ ಕೃತ್ಯ ಎಸಗಿದ್ದಾನೆ.

ಸಕ್ತಿವೇಲ್ ವಿಲ್ಲುಪುರಂನ ಕಲಮರುಧುರ್ ಗ್ರಾಮದ ದಲಿತ ಸಮುದಾಯದವನಾಗಿದ್ದು, ಚಿದಂಬರಂನಲ್ಲಿ ಚಿಪ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಈತ ಕಡಂಪುಲಿಯೂರ್ ಗ್ರಾಮದ ಧನಲಕ್ಷ್ಮಿಯನ್ನು ಕಳೆದ 6 ತಿಂಗಳಿನಿಂದ ಪ್ರೀತಿಸುತ್ತಿದ್ದನು.

ಈ ವಿಚಾರ ಅಂಗಡಿ ಮಾಲೀಕನಿಗೆ ತಿಳಿದು ಆತ ಸಕ್ತಿವೇಲ್ ಗೆ ಕ್ಲಾಸ್ ತೆಗೆದುಕೊಂಡಿದ್ದನು. ನಿಮ್ಮಿಬ್ಬರ ಲವ್ ನಿಂದಾಗಿ ಸಮುದಾಯಗಳ ಮಧ್ಯೆ ಜಗಳವಾಗುವ ಸಾಧ್ಯತೆಗಳಿವೆ ಎಂದು ಸಕ್ತಿವೇಲ್ ಗೆ ಬೈದಿದ್ದರು.

ಆ ಬಳಿಕ ಸಕ್ತಿವೇಲ್ ಕೆಲಸ ಹುಡುಕಲು ಚೆನ್ನೈಗೆ ತೆರಳಿದನು. ಇತ್ತ ಧನಲಕ್ಷ್ಮಿ ಚಿದಂಬರಂನಲ್ಲಿರುವ ಅಜ್ಜಿ ಮನೆಯಲ್ಲಿ ನೆಲೆಸಿದಳು. ಆದರೆ ಕುಟುಂಬಸ್ಥರ ಭಯದಿಂದ ಆಕೆ ಸಕ್ತಿವೇಲ್ ಜೊತೆಗಿನ ಸಂಬಂಧವನ್ನು ಮುರಿಯಲು ಪ್ರಯತ್ನಿಸುತ್ತಿದ್ದಳು.

ಇದರಿಂದ ಸಿಟ್ಟುಗೊಂಡ ಸಕ್ತಿವೇಲ್, ಯುವತಿಯು ಅಜ್ಜಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದ್ದು, ಸಕ್ತಿವೇಲ್ ಯುವತಿಗೆ ತಲೆ, ಹೊಟ್ಟೆ ಹಾಗೂ ಕಾಲಿಗೆ ಹೊಡೆದಿದ್ದಾನೆ. ನಂತರ ಆಕೆಯ ಕತ್ತು ಸೀಳಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಯುವತಿಯ ಕಿರುಚಾಟ ಕೇಳಿದ ನೆರೆಹೊರೆಯುವರು ಸ್ಥಳಕ್ಕೆ ದೌಡಾಯಿಸಿದ್ದು, ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಧನಲಕ್ಷ್ಮಿ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆಯ ಸಂಬಂಧ ಧನಲಕ್ಷ್ಮಿ ಅಜ್ಜಿ ನಿಡಿದ ದೂರಿನಂತೆ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 448(ಮನೆಗೆ ಅಕ್ರಮ ಪ್ರವೇಶ), 307(ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಿದಂಬರಂ ತಾಲೂಕು ಪೊಲೀಸ್ ಠಾಣೆಯಲ್ಲಿ ಸಕ್ತಿವೇಲ್ ತನಿಖೆ ನಡೆಯುತ್ತಿದೆ.

Comments are closed.