ರಾಷ್ಟ್ರೀಯ

ಮಹಿಳಾ ಎಸ್‍ಪಿ, ಪೇದೆಗಳನ್ನು ಕಚ್ಚಿ, ಕೊಲ್ಲಲು ಯತ್ನಿಸಿದ ಟೆಕ್ಕಿ

Pinterest LinkedIn Tumblr


ಹೈದರಾಬಾದ್: ವೀಕ್ ಎಂಡ್ ಎಂದು ಮಾದಕವಸ್ತು ಸೇವಿಸಿ ನಶೆಯಲ್ಲಿ ತೂರಾಡಿ ಬೀದಿಯಲ್ಲಿ ಬಿದ್ದಿದ್ದ ಮಹಿಳಾ ಟೆಕ್ಕಿಯನ್ನು ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ವೇಳೆ ರೊಚ್ಚಿಗೆದ್ದ ಟೆಕ್ಕಿ ಪೊಲೀಸ್ ಠಾಣೆಯಲ್ಲಿಯೇ ಮಹಿಳಾ ಪೇದೆಗಳನ್ನು ಕಚ್ಚಿ, ಹೊಡೆದು ಹಲ್ಲೆ ನಡೆಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಶನಿವಾರ ರಾತ್ರಿ ಈ ಘಟನೆ ನಡೆದಿದೆ. ನಾಗಾಲ್ಯಾಂಡ್ ಮೂಲದ ಮಹಿಳಾ ಟೆಕ್ಕಿ ಹೈದರಾಬಾದ್‍ನ ಮಾಧಾಪುರ್‌ನಲ್ಲಿರುವ ಸಾಫ್ಟ್‌ವೇರ್ ಕಂಪನಿಯ ಸಿಬ್ಬಂದಿ. ಆಕೆ ಶನಿವಾರ ಮಾದಕವಸ್ತು ಸೇವಿಸಿ ಮೈಮೇಲೆ ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಜಹೀರಾನಗರದ ರಸ್ತೆಯಲ್ಲಿ ಬಿದ್ದಿದ್ದಳು. ಆಕೆಯನ್ನು ಕಂಡ ಪೊಲೀಸರು ಠಾಣೆಗೆ ಕರೆತಂದಿದ್ದರು. ಟೆಕ್ಕಿಗೆ ಪ್ರಜ್ಞೆ ಬಂದ ಬಳಿಕ ಆಕೆಯನ್ನು ಸಂಬಾಳಿಸಲು ಪೊಲೀಸರು ಹರಸಾಹಸವನ್ನೇ ಪಡಬೇಕಾಯಿತು.

ಮೊದಲೇ ನಶೆಯಲ್ಲಿದ್ದ ಟೆಕ್ಕಿ ಪೊಲೀಸರ ಮೇಲೆ ರೊಚ್ಚಿಗೆದ್ದು ಹಲ್ಲೆ ಮಾಡಲು ಆರಂಭಿಸಿದಳು. ಆಕೆಯನ್ನು ಹಿಡಿಯಲು ಹೋದ ಮಹಿಳಾ ಪೇದೆಗಳು ಹಾಗೂ ಮಹಿಳಾ ಎಸ್‍ಪಿ ಮೇಲೆಯೂ ಹಲ್ಲೆ ನಡೆಸಿದಳು. ಅವರನ್ನು ಹೊಡೆದು, ಕಚ್ಚಿ ಹಲ್ಲೆ ಮಾಡಿದ್ದಲ್ಲದೇ ಕೆಲ ಪೇದೆಯನ್ನು ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಳು. ಈ ವೇಳೆ ತಡೆಯಲು ಬಂದ ಪುರುಷ ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದಳು.

ಅಷ್ಟೇ ಅಲ್ಲದೆ ಠಾಣೆಯಿಂದ ಓಡಿಹೋಗಲು ಯತ್ನಿಸಿದಾಗ ಪೊಲೀಸರು ಆಕೆಯನ್ನು ಅಡ್ಡಗಟ್ಟಿ, ಆಕೆಗೆ ಕೋಳ ಹಾಕಿ ಮೂಲೆಗೆ ಕೂರಿಸಿದರು. ಈ ದೃಶ್ಯಾವಳಿಗಳನ್ನು ಕೆಲ ಸಿಬ್ಬಂದಿ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಕೂಡ ಮಾಡಿದ್ದಾರೆ.

ಈ ಸಂಬಂಧ ಮಾತನಾಡಿದ ಪೊಲೀಸರು, ಟೆಕ್ಕಿ ಮದ್ಯ ಅಥವಾ ಡ್ರಗ್ಸ್ ಸೇವಿಸಿದ್ದಳು. ಸದ್ಯ ಆಕೆಯ ರಕ್ತದ ಸ್ಯಾಂಪಲ್‍ನನ್ನು ಪರೀಕ್ಷೆಗೆ ಕಳುಹಿಸಿದ್ದೇವೆ. ಆಕೆ ನಮ್ಮ ವಶದಲ್ಲಿಯೇ ಇದ್ದಾಳೆ ಎಂದು ತಿಳಿಸಿದ್ದಾರೆ.

Comments are closed.