ರಾಷ್ಟ್ರೀಯ

ತಮ್ಮ ವರ್ಗಾವಣೆಯನ್ನು ಖಂಡಿಸಿ ಪೊಲೀಸ್ ಅಧಿಕಾರಿ 40 ಕಿ.ಮೀ ಓಡಿದ!

Pinterest LinkedIn Tumblr


ಲಕ್ನೋ: ತಮ್ಮ ವರ್ಗಾವಣೆಯನ್ನು ಖಂಡಿಸಿ ಪೊಲೀಸ್ ಅಧಿಕಾರಿ 40 ಕಿ.ಮೀ. ಓಡಿದ್ದಾರೆ. ಉತ್ತರ ಪ್ರದೇಶದ ಇಟಾವ ಜಿಲ್ಲೆಯ ಠಾಣೆಯಿಂದ ಓಡಲು ಆರಂಭಿಸಿ, ಸುಸ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವಿಜಯ್ ಪ್ರತಾಪ್ 40 ಕಿ.ಮೀ. ಓಡಿರುವ ಪೊಲೀಸ್ ಇನ್‍ಸ್ಪೆಕ್ಟರ್. ವಿಜಯ್ ಅವರಿಗೆ ಇಟಾವದಿಂದ 60 ಕಿ.ಮೀ. ದೂರದಲ್ಲಿರುವ ಬಿಟೌಲಿ ಠಾಣೆಗೆ ವರ್ಗಾವಣೆ ಆಗಿತ್ತು. ತಮ್ಮ ವರ್ಗಾವಣೆಯನ್ನು ಖಂಡಿಸಿದ ವಿಜಯ್, ನಾನು ಓಡಿಕೊಂಡು ಹೋಗಿ ಬಿಟೌಲಿ ಠಾಣೆಗೆ ಸೇರಿಕೊಳ್ಳುತ್ತೇನೆ ಎಂದು ನಿರ್ಣಯಿಸಿದ್ದರು. ಠಾಣೆಯ ಹಿರಿಯ ಅಧಿಕಾರಿಗಳು ಇದಕ್ಕೆ ಹೊಣೆ ಎಂದು ಆರೋಪಿಸಿ ವಿಜಯ್ ಪ್ರತಾಪ್ ಓಡಲು ಆರಂಭಿಸಿದ್ದರು.

ಸಮವಸ್ತ್ರ ಸಹಿತ ವಿಜಯ್ ಪ್ರತಾಪ್ ಓಡುತ್ತಿರೋದನ್ನು ನೋಡಿದ ಗ್ರಾಮಸ್ಥರು ಕಳ್ಳನನ್ನು ಹಿಡಿಯಲು ಇರಬಹುದು ಎಂದು ಊಹಿಸಿದ್ದಾರೆ. 60 ಕಿ.ಮೀ. ಗುರಿ ಇಟ್ಟುಕೊಂಡಿದ್ದ ವಿಜಯ್ ಪ್ರತಾಪ್ 40 ಕಿ.ಮೀ ಬಳಿಕ ಹನುಮಂತಪುರ ಬಳಿಯ ಚಕರನಗರನಲ್ಲಿ ಸುಸ್ತಾಗಿದ್ದಾರೆ. ಕೂಡಲೇ ಗ್ರಾಮಸ್ಥರು ವಿಜಯ್ ಅವರನ್ನು ಮಂಚದ ಮೇಲೆ ಮಲಗಿಸಿ ಆರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಎಸ್‍ಎಸ್‍ಪಿ ಸುರೇಶ್ ಕುಮಾರ್ ಮಿಶ್ರಾ, ಯಾವ ಪೊಲೀಸ್ ಅಧಿಕಾರಿ ಓಡಿದ್ದಾರೆ ಎಂಬ ಮಾಹಿತಿ ನನಗಿಲ್ಲ. ಮಾಧ್ಯಮದವರು ತಿಳಿಸಿದಾಗ, ಇಲ್ಲಿ ಮಾಡಲು ಏನು ಕೆಲಸ ಉಳಿದಿದೆ ಎಂದಿದ್ದಾರೆ.

ವಿಜಯ್ ಪ್ರತಾಪ್ ಹೇಳಿದ್ದೇನು?
ಈ ಮೊದಲು ಬಿಟೌಲಿ ಠಾಣೆಯಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿಯ ನಿರೀಕ್ಷಕರೊಂದಿಗೆ ವೈಮನಸ್ಸು ಉಂಟಾದ ಹಿನ್ನೆಲೆಯಲ್ಲಿ ಇಲ್ಲಿಗೆ ವರ್ಗಾಯಿಸಲಾಗಿತ್ತು. ನಾನು ಬೇರೆ ಎಲ್ಲಿಯೂ ವರ್ಗಾವಣೆಯೂ ಕೇಳಿರಲಿಲ್ಲ ಮತ್ತು ಮತ್ತೊಂದು ವಿಭಾಗಕ್ಕೆ ಕಳುಹಿಸಿ ಎಂದು ಯಾರ ಬಳಿಯೂ ಮನವಿ ಮಾಡಿರಲಿಲ್ಲ. ನನ್ನನ್ನು ಬೇರೆ ಠಾಣೆಗೂ ವರ್ಗಾವಣೆ ಮಾಡಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿಯೇ ಬಿಟೌಲಿಗೆ ಕಳುಹಿಸಲಾಗುತ್ತಿದೆ ಎಂದು ವಿಜಯ್ ಪ್ರತಾಪ್ ಆರೋಪಿಸಿದ್ದಾರೆ.

ವರ್ಗಾವಣೆ ಬಳಿಕ ಯಾರ ಮೇಲೆ ಕೋಪ ಮಾಡಿಕೊಳ್ಳಲಿ. ಇಲಾಖೆ ನನಗೆ ಬೈಕ್ ನೀಡಿದ್ದರೂ 60 ಕಿ.ಮೀ. ಓಡಿ ಹೋಗಿ ಬಿಟೌಲಿಯಲ್ಲಿ ಸೇವೆಗೆ ಸೇರಿಕೊಳ್ಳುತ್ತೇನೆ ಎಂದು ನಿರ್ಧರಿಸಿದೆ. 40 ಕಿ.ಮೀ. ಬಳಿಕ ಸುಸ್ತಾಗಿದ್ದರಿಂದ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರು ಎಂದು ವಿಜಯ್ ಪ್ರತಾಪ್ ಹೇಳುತ್ತಾರೆ.

Comments are closed.