ರಾಷ್ಟ್ರೀಯ

ಮಹಾ‘ರಾಷ್ಟ್ರ’ಪತಿ ಆಳ್ವಿಕೆಗೆ ರಾಮನಾಥ್‌ ಕೋವಿಂದ್‌ ನೀಡಿರುವ ಕಾರಣ ಏನು ಗೊತ್ತೆ?

Pinterest LinkedIn Tumblr


ಮುಂಬಯಿ: ಸರಕಾರ ರಚನೆ ವಿಚಾರದಲ್ಲಿಕಳೆದ 19 ದಿನಗಳಿಂದ ಮಹಾರಾಷ್ಟ್ರದಲ್ಲಿನಡೆಯುತ್ತಿದ್ದ ಬೃಹನ್ನಾಟಕಕ್ಕೆ ಮಂಗಳವಾರ ರಾಷ್ಟ್ರಪತಿ ಆಡಳಿತದ ಮೂಲಕ ತಾತ್ಕಾಲಿಕ ತೆರೆ ಬಿದ್ದಿದೆ. ರಾಜ್ಯದಲ್ಲಿರಾಜಕೀಯ ಅರಾಜಕತೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಸಂವಿಧಾನದ 356(1)ನೇ ವಿಧಿ ಅಡಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದ್ದಾರೆ.
ಸರಕಾರ ರಚನೆಗೆ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ಪಕ್ಷಗಳ ಹಗ್ಗ ಜಗ್ಗಾಟ ಮತ್ತು ಮ್ಯಾರಥಾನ್‌ ಸಭೆಗಳ ನಡುವೆಯೇ ಮಂಗಳವಾರ ಮಧ್ಯಾಹ್ನದ ವೇಳೆಗೆ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯಾರಿ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದರು. ಮಧ್ಯಾಹ್ನ ನಡೆದ ಕೇಂದ್ರ ಸಂಪುಟ ಸಭೆಯಲ್ಲಿಈ ಶಿಫಾರಸನ್ನು ಅಂಗೀಕರಿಸಿ ನಿರ್ಣಯ ಕೈಗೊಳ್ಳಲಾಯಿತು. ಸಂಜೆ ವೇಳೆಗೆ ಈ ಸಂಬಂಧ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕುವುದರೊಂದಿಗೆ ರಾಜಕೀಯ ಮೇಲಾಟಕ್ಕೆ ತಾತ್ಕಾಲಿಕ ಬ್ರೇಕ್‌ ಹಾಕಿದರು.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು : ರಾಷ್ಟ್ರಪತಿ ಆಡಳಿತ ಹೇರುವ ಅಧಿಕಾರ ಕೇಂದ್ರಕ್ಕಿದೆಯೇ?

ರಾಜ್ಯಪಾಲರು ನೀಡಿದ ಕಾರಣ
ಫಲಿತಾಂಶ ಪ್ರಕಟಗೊಂಡು 15 ದಿನ ಕಳೆದರೂ ಯಾವ ಪಕ್ಷವೂ ಬಹುಮತ ಸಾಬೀತು ಪಡಿಸಿಲ್ಲ. ಎಲ್ಲಾಪ್ರಯತ್ನಗಳ ಹೊರತಾಗಿಯೂ ರಾಜ್ಯದಲ್ಲಿಸ್ಥಿರ ಸರಕಾರ ರಚನೆಯಾಗುವ ಯಾವುದೇ ಸಾಧ್ಯತೆ ಕಾಣುತ್ತಿಲ್ಲ. ಹೀಗಾರಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ರಾಜ್ಯಪಾಲರು ತಮ್ಮ ಶಿಫಾರಸು ವರದಿಯಲ್ಲಿಹೇಳಿದ್ದಾರೆ.

3 ದಿನ ಗಡುವು ಕೇಳಿದ ಎನ್‌ಸಿಪಿ
ಬಹುಮತ ಸಾಬೀತುಪಡಿಸಲು ಮಂಗಳವಾರ ರಾತ್ರಿ 8.30ರವರೆಗೂ ಎನ್‌ಸಿಪಿಗೆ ರಾಜ್ಯಪಾಲರು ಕಾಲಾವಕಾಶ ನೀಡಿದ್ದರೂ ಅದಕ್ಕೆ ಮುನ್ನವೇ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿರುವ ಬಗ್ಗೆ ವ್ಯಕ್ತವಾಗಿರುವ ಆಕ್ಷೇಪಕ್ಕೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ. ”ಎನ್‌ಸಿಪಿ ಮುಖಂಡರು ಮಂಗಳವಾರ ಮಧ್ಯಾಹ್ನ 11.30ಕ್ಕೆ ರಾಜ್ಯಪಾಲರನ್ನು ಭೇಟಿಯಾಗಿ, ಇನ್ನೂ 3 ದಿನ ಸಮಯಾವಕಾಶ ಕೋರಿದ್ದರು. ಆದರೆ, ಯಾವುದೇ ಪಕ್ಷ ಬಹುಮತ ಸಾಬೀತುಪಡಿಸುವ ಸೂಚನೆ ಕಾಣದ ಹಿನ್ನೆಲೆಯಲ್ಲಿರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ,” ಎಂದು ಸಚಿವಾಲಯ ತಿಳಿಸಿದೆ.

ಮಹಾರಾಷ್ಟ್ರದಲ್ಲಿ 356ನೇ ವಿಧಿ ಜಾರಿಗೊಳಿಸಿದ ರಾಷ್ಟ್ರಪತಿ

ಮುಂದೇನು?

* ತಕ್ಷಣದಿಂದಲೇ ವಿಧಾನಸಭೆ ಅಮಾನತು
* 6 ತಿಂಗಳ ಒಳಗೆ ಯಾವುದೇ ಪಕ್ಷ ಸರಕಾರ ರಚನೆ ಹಕ್ಕು ಮಂಡಿಸಲು ಅವಕಾಶ
* ಬಹುಮತ ಸಾಬೀತುಪಡಿಸದಿದ್ದರೆ ಮತ್ತೆ ಚುನಾವಣೆ ನಡೆಸಬೇಕು

ಇದುವರೆಗಿನ ರಾಜಕೀಯ ಮೇಲಾಟ

* ಮಿತ್ರಪಕ್ಷಗಳಾದ ಶಿವಸೇನೆ-ಬಿಜೆಪಿ ನಡುವೆ 50:50 ಅಧಿಕಾರ ಸೂತ್ರ, ಸಿಎಂ ಹುದ್ದೆಗಾಗಿ ಹಗ್ಗಜಗ್ಗಾಟ
* ಶಿವಸೇನೆ ಪಟ್ಟು ಬಿಡದ ಕಾರಣ ಸರಕಾರ ರಚನೆ ಮಾಡುವುದಿಲ್ಲಎಂದು ಬಿಜೆಪಿ ಘೋಷಣೆ
* ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿ ಜತೆ ಕೈಜೋಡಿಸಲು ಶಿವಸೇನೆ ನಿರ್ಧಾರ, ಸರಕಾರ ರಚನೆಗೆ ಹಕ್ಕು ಮಂಡನೆ
* 48 ಗಂಟೆ ಸಮಯಾವಕಾಶ ಕೇಳಿದ್ದರಿಂದ ಸೇನೆ ಬದಲಿಗೆ ಎನ್‌ಸಿಪಿಗೆ ಸರಕಾರ ರಚನೆಗೆ ಗವರ್ನರ್‌ ಅಹ್ವಾನ
* ಎನ್‌ಸಿಪಿ ಸಹ 3 ದಿನ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿರಾಷ್ಟ್ರಪತಿ ಆಳ್ವಿಕೆ ಜಾರಿಗೆ ಶಿಫಾರಸು

ಸುಪ್ರೀಂ ಮೆಟ್ಟಿಲೇರಿದ ಸೇನೆ
ಬಹುಮತ ಸಾಬೀತಿಗೆ ಹೆಚ್ಚಿನ ಸಮಯಾವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಬುಧವಾರ ಅರ್ಜಿ ತುರ್ತು ವಿಚಾರಣೆಗೆ ಮನವಿ ಸಲ್ಲಿಸಲಿದೆ.

ಪ್ರಮುಖರ ಹೇಳಿಕೆಗಳು
ರಾಜ್ಯಪಾಲರ ಕ್ರಮವು ಪ್ರಜಾಪ್ರಭುತ್ವ ಪ್ರಕ್ರಿಯೆಯ ಘೋರ ಅಣಕ.
-ರಣದೀಪ್‌ ಸುರ್ಜೆವಾಲ, ಕಾಂಗ್ರೆಸ್‌ ವಕ್ತಾರ

ಕಾಂಗ್ರೆಸ್‌-ಎನ್‌ಸಿಪಿ ಜತೆ ಕೂತು ಸಮಾಲೋಚನೆ ನಡೆಸಲು ನಮಗಿನ್ನೂ 6 ತಿಂಗಳ ಸಮಯಾವಕಾಶ ದೊರೆತಂತಾಗಿದೆ.
-ಉದ್ಧವ್‌ ಠಾಕ್ರೆ, ಶಿವಸೇನೆ ಮುಖಂಡ

ನಮಗೇನೂ ಆತುರವಿಲ್ಲ, ಕಾಂಗ್ರೆಸ್‌ ಜತೆ ಚರ್ಚಿಸಿ ತೀರ್ಮಾನಿಸುತ್ತೇವೆ.
-ಶರದ್‌ ಪವಾರ್‌, ಎನ್‌ಸಿಪಿ ವರಿಷ್ಠ

Comments are closed.