ರಾಷ್ಟ್ರೀಯ

ಪಾಕಿಸ್ತಾನ ಸೈನಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ

Pinterest LinkedIn Tumblr

ಹೊಸದಿಲ್ಲಿ: ಆರ್ಥಿಕ ದಿವಾಳಿಯ ಹಾದಿ ತುಳಿದಿರುವ ಪಾಕಿಸ್ತಾನವು ಆಂತರಿಕ ಬಿಕ್ಕಟ್ಟುಗಳ ನಡುವೆಯೂ ಭಾರತದ ಗಡಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಹೆಣಗಾಟ ನಡೆಸಿದೆ. ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಸೇನೆ ಜಮಾವಣೆಯನ್ನು ನಿರಂತರ ಹೆಚ್ಚಳ ಮಾಡುತ್ತಲೇ ಬಂದಿದೆ. ಈ ಕುರಿತು ಭಾರತ ಅಂತಾರಾಷ್ಟ್ರೀಯ ಸಮುದಾಯದ ಗಮನಕ್ಕೆ ತಂದಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.
ಭಾರತೀಯ ಸೇನೆಯು ನೆರೆ ರಾಷ್ಟ್ರದ ಸೇನಾ ಜಮಾವಣೆಯನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಪ್ರತಿ ಹಂತದ ವರದಿಯನ್ನು ಕೇಂದ್ರ ಸರಕಾರಕ್ಕೆ ನೀಡುತ್ತ ಬಂದಿದೆ. ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್‌ ಅಗಾಧ ಪ್ರಮಾಣದ ಆರ್ಟಿಲರಿ ಗನ್‌ಗಳನ್ನು ದಾಸ್ತಾನು ಮಾಡಿಕೊಂಡಿದೆ. ಅವನ್ನು ಬಳಸಿಕೊಂಡು ಭಾರತದ ಮೇಲೆ ಅನೇಕ ಅಪ್ರಚೋದಿತ ಶೆಲ್‌ ದಾಳಿಯನ್ನೂ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡಿದೆ.
”370ನೇ ವಿಧಿ ರದ್ದುಗೊಂಡ ಬಳಿಕ ಪಾಕಿಸ್ತಾನದ ಗಡಿ ಕಿತಾಪತಿ ಹೆಚ್ಚಿದೆ. ಆರ್ಟಿಲರಿ ಶೆಲ್‌ಗಳನ್ನು ಬಳಸಿ ಭಾರತ ಗಡಿ ಭಾಗದ ನಾಗರಿಕ ನೆಲೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಅಷ್ಟಕ್ಕೂ ಅದು ನೇರ ಯುದ್ಧ ನಡೆಸುವ ತಾಕತ್ತಿಲ್ಲದ ದೇಶ. ಅಡ್ಡದಾರಿಗಳೇ ಅದಕ್ಕೆ ಆಧಾರ. ಶೆಲ್‌ ದಾಳಿಯ ಸಂಘರ್ಷದ ನಡುವೆ ಉಗ್ರರನ್ನು ಭಾರತದ ಒಳಕ್ಕೆ ನುಗ್ಗಿಸುವ ತಂತ್ರವನ್ನು ಪ್ರಯೋಗಿಸುತ್ತಿದೆ. ಪಾಕ್‌ ಗಡಿ ಭಾಗದ ಅಡಗು ದಾಣಗಳಲ್ಲಿಈಗ ಉಗ್ರರ ದಂಡು ಭರ್ತಿಯಾಗಿ ನಿಂತಿದೆ,” ಎಂದು ಸೇನೆ ನೀಡಿರುವ ವರದಿಯಲ್ಲಿ ವಿವರಿಸಲಾಗಿದೆ.

ವಿಶೇಷ ಕಾರ್ಯಪಡೆ ನಿಯೋಜನೆ

ತನ್ನ ವಿಶೇಷ ಕಾರ್ಯ ಪಡೆಯ (ಎಸ್‌ಎಸ್‌ಜಿ) 2000 ಯೋಧರನ್ನು ಪಾಕಿಸ್ತಾನ ಗಡಿ ಭಾಗಕ್ಕೆ ರವಾನಿಸಿದೆ. ಇದರೊಂದಿಗೆ ಆ ದೇಶದ ಗಡಿ ಕಾವಲು ನಿಯೋಜಿತ ಯೋಧರ ಸಂಖ್ಯೆ 90,000 ದಾಟಿದೆ. ಇದೇ ವೇಳೆ ಭಾರತ ಕೂಡ ಮೈಮರೆತಿಲ್ಲ. ಪಾಕ್‌ನ 90 ಸಾವಿರಕ್ಕೆ ಪ್ರತಿಯಾಗಿ 1,13,000 ಭಾರತೀಯ ಸೇನೆ ಸಿಬ್ಬಂದಿ ಗಡಿಯಲ್ಲಿ ಸನ್ನದ್ಧವಾಗಿದೆ. ಆದರೆ ಭಾರತೀಯ ಪಡೆಗಳ ನಿಯೋಜನೆ ಬಗ್ಗೆ ಪಾಕ್‌ ಭಿನ್ನ ರೀತಿಯ ಹೇಳಿಕೆಗಳನ್ನು ನೀಡುತ್ತ ಬಂದಿದೆ. 9 ಲಕ್ಷ ಯೋಧರನ್ನು ನಿಯೋಜಿಸುವ ಮೂಲಕ ಇಡೀ ಕಾಶ್ಮೀರ ಕಣಿವೆಯನ್ನು ಸೇನಾ ನೆಲೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಅದು ಬೊಬ್ಬೆ ಹಾಕಿದೆ. ಈ ಸುಳ್ಳನ್ನು ಕೂಡ ವರದಿ ಅಲ್ಲಗಳೆದಿದೆ.

”ಆಗಸ್ಟ್‌ 5ರಂದು ವಿಶೇಷ ವಿಧಿ ರದ್ದು ಪಡಿಸಿದ ಬಳಿಕ ಶಾಂತಿ ಪಾಲನೆಗಾಗಿ ಹೆಚ್ಚುವರಿ 1.5 ಲಕ್ಷ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಯಿತು. ಇದೂ ಸೇರಿ 2 ಲಕ್ಷ 31 ಸಾವಿರ ಭದ್ರತಾ ಸಿಬ್ಬಂದಿ ಕಣಿವೆಯಲ್ಲಿದ್ದಾರೆ. ಪಾಕಿಸ್ತಾನ ಹೇಳುವಂತೆ 9 ಲಕ್ಷ ಇಲ್ಲ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಸ್ತವಕ್ಕೆ ದೂರವಾದ ಕಾರಣಗಳನ್ನು ನೆಪ ಮಾಡಿಕೊಂಡು ಗಡಿಯಲ್ಲಿ ಸೇನೆ ಜಮಾವಣೆ ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತ ಶಾಂತಿಯುತ ಮಾರ್ಗದಲ್ಲಿಯೇ ಕ್ರಮ ಕೈಗೊಂಡಿದೆ. ಸುಳ್ಳು ಮತ್ತು ವಂಚನೆಯ ಹಾದಿ ಹಿಡಿದು ಗಡಿಯಲ್ಲಿ ಗದ್ದಲ ಸೃಷ್ಟಿಸುತ್ತಿರುವ ನೆರೆ ರಾಷ್ಟ್ರದ ಮೇಲೆ ನಿಯಂತ್ರಣ ಹೇರುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ.

Comments are closed.