ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ವಿಶೇಷ ಅಲಂಕಾರ

Pinterest LinkedIn Tumblr

ಅಯೋಧ್ಯೆ/ಹೊಸದಿಲ್ಲಿ: ಹನುಮಾನ್‌ ಗಾರ್ಹಿಯಲ್ಲಿ ಭಕ್ತರ ತುಂಬಿದ ಉತ್ಸಾಹ, ಎಲ್ಲೆಡೆ ಭಕ್ತಿ, ಪುಳಕದ ವಾತಾವರಣ… ಇದು ರವಿವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಅನಂತರ ಅಯೋಧ್ಯೆಯಲ್ಲಿ ಕಂಡು ಬಂದ ವಾತಾವರಣ. ತೀರ್ಪಿನ ಅನಂತರ ಏನಾಗಲಿ ದೆಯೋ ಎಂಬ ಆತಂಕದ ವಾತಾವರಣ ಇದ್ದರೂ, ಹನುಮಾನ್‌ ಗಾರ್ಹಿ, ನಯಾ ಘಾಟ್‌ಗಳಲ್ಲಿ ಭಕ್ತ ಜನರ ಉತ್ಸಾಹಕ್ಕೇನೂ ಭಂಗವಾಗಲಿಲ್ಲ. ಬೆಳಗ್ಗಿನಿಂದಲೂ ದೇಗುಲಗಳ ನಗರಿಯಲ್ಲಿ ಭಕ್ತಿಯ ವಾತಾವರಣ ಇತ್ತು.

ಸಂಜೆಯಾಗುತ್ತಿದ್ದಂತೆಯೇ ವಿವಿಧ ದೇಗುಲಗಳಲ್ಲಿ ಭಜನೆ, ಕೀರ್ತನೆಗಳ ಝೇಂಕಾರ ಕಿವಿ ತುಂಬಲಾ ರಂಭಿಸಿತ್ತು. ಇವೆಲ್ಲದರ ನಡುವೆಯೇ ಉತ್ತರ ಪ್ರದೇಶ ಮತ್ತು ಕೇಂದ್ರ ಸರಕಾರದ ಭದ್ರತಾ ಪಡೆ ಗಳು ಗಸ್ತು ತಿರುಗಿ ಶ್ರದ್ಧಾಳುಗಳಿಗೆ ಇನಿತೂ ತೊಂದರೆಯಾಗದಂತೆ ನೋಡಿಕೊಂಡರು. ರಾಮ ಲಲ್ಲಾ ದೇಗುಲದ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಶ್ರೀರಾಮನ ಮೂರ್ತಿಗೆ ಹೊಸ ಬಟ್ಟೆಗಳನ್ನು ತೊಡಿಸಿ ಅಲಂಕಾರ ಮಾಡಿದ್ದರು. ಆಯೋಧ್ಯೆಯ ಋಕಬ್‌ಗಂಜ್‌ ಮತ್ತು ಇತರ ಭಾಗಗಳಲ್ಲಿ ಜನರು ಬೆಳಗ್ಗಿನಿಂದಲೇ ವಿವಿಧ ಪತ್ರಿಕೆಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಇರುವ ಸುದ್ದಿಗಳನ್ನು ಓದಿ ಚರ್ಚೆ ನಡೆಸುತ್ತಿದ್ದರು.

ಹನುಮಾನ್‌ ಗಾರ್ಹಿ ದೇಗುಲದ ಆಸುಪಾಸಿನಲ್ಲಿರುವ ಮಳಿಗೆಗಳ ಮಾಲೀಕರು ಮತ್ತು ಸಿಬಂದಿ ಕೂಡ ತೀರ್ಪಿನ ಬಗ್ಗೆ ಮೆಚ್ಚುಗೆ, ನಿರಾಳ ಭಾವ ವ್ಯಕ್ತಪಡಿಸಿದರು. ‘ರಾಮ ಲಲ್ಲಾನ ಪರವಾಗಿ ತೀರ್ಪು ಪ್ರಕಟವಾದ ಬಳಿಕ ಮಳಿಗೆಯಲ್ಲಿ ಸಿಹಿ ತಿನಿಸುಗಳು ಮತ್ತು ಪುಷ್ಪ ಮಾಲಿಕೆಗಳ ಕೊರತೆ ಉಂಟಾಗಿದೆ. ಇನ್ನು ಮುಂದೆ ಅಯೋಧ್ಯೆ ಸರಿಯಾದ ದಿಕ್ಕಿನಲ್ಲಿ ಸಾಗಲಿದೆ’ ಎಂದು ಅಂಗಡಿ ಮಾಲಕರೊಬ್ಬರು ಹೇಳಿದ್ದಾರೆ. ಇಲ್ಲಿಗೆ ಆಗಮಿಸುತ್ತಿರುವ ಪ್ರವಾಸಿಗರು ಹೆಮ್ಮೆಯ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಜೈಪುರದ ಅವಧೇಶ್‌ ಶರ್ಮಾ ಮತ್ತು ಕಾಜೋರ್ಮಾಲ್‌ ಶರ್ಮಾ ತೀರ್ಪಿನ ಬಳಿಕ ಅಯೋಧ್ಯೆಗೆ ಆಗಮಿಸಿ ದೇವರನ್ನು ವೀಕ್ಷಿಸಿದ್ದು ಪುನೀತರಾದ ಭಾವನೆ ಹೊಂದಿರುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರದ ಭಿವಾಂಡಿಯಿಂದ 55 ಮಂದಿ ಪ್ರವಾಸಿಗರ ಜತೆಗೆ ಆಗಮಿಸಿದ್ದ ಗಣೇಶ್‌ ತಾರೆ ಕೂಡ ತೀರ್ಪಿನ ಬಗ್ಗೆ ಹೆಮ್ಮೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚು ಮಾರಾಟ: ಅಯೋಧ್ಯೆಯಲ್ಲಿ ಪತ್ರಿಕೆ ಮಾರಾಟ ಮಾಡುವ 58 ವರ್ಷದ ರಾಮಶಂಕರ ಯಾದವ್‌ ದಿನ ವಿಡೀ ಬ್ಯುಸಿಯಾಗಿದ್ದರು. ಪ್ರತಿ ದಿನ ಅವರು 11 ಸ್ಥಳಗಳ ಮನೆಗಳಿಗೆ ತೆರಳಿ 500-525 ಪತ್ರಿಕೆಗಳನ್ನು ಮಾರು ತ್ತಾರೆ. ತೀರ್ಪಿನ ಮಾರನೇ ದಿನ ಅವರು 750 ಪತ್ರಿಕೆ ಗಳನ್ನು ಮನೆಗಳಿಗೆ ನೀಡಿದ್ದಾರೆ. “ಈ ರವಿವಾರ ಎಂದಿ ನಂತೆ ಇರಲಿಲ್ಲ. ಇದು ಹೊಸತು ಎನಿಸುತ್ತಿದೆ. 1994ರಿಂದ ಈ ವೃತ್ತಿಯಲ್ಲಿ ಇರುವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಭಕ್ತರು ಬರಲಿದ್ದಾರೆ’ ಎಂಬ ವಿಶ್ವಾಸ ಅವರದ್ದು.

ನಿರ್ಮಾಣಕ್ಕೆ ಬೇಕು ಐದು ವರ್ಷ
ವಿವಾದದ ಕರಿ ನೆರಳು ಮರೆಯಾಗಿ ‘ಅಯೋಧ್ಯೆ ರಾಮನದ್ದೇ’ ಎಂದು ಸುಪ್ರೀಂ ಕೋರ್ಟ್‌ ತೀರ್ಪಿತ್ತಾಗಿದೆ. ಹೀಗಾಗಿ ರಾಮ ಜನ್ಮಭೂಮಿಯಲ್ಲಿ ಶ್ರೀರಾಮನ ಮಂದಿರ ನಿರ್ಮಿಸಲು ಇದ್ದ ಎಲ್ಲ ಅಡ್ಡಿ, ಆತಂಕಗಳು ದೂರಾಗಿವೆ. ಆದರೆ, ವಿಶ್ವ ಹಿಂದೂ ಪರಿಷತ್‌ ವಿನ್ಯಾಸಕ್ಕೆ ಅನುಗುಣವಾಗಿ ಮಂದಿರ ನಿರ್ಮಿಸಲು ಕನಿಷ್ಠ ಐದು ವರ್ಷ ಬೇಕೇ ಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸೇ ತೀರುವ ದೃಢ ಸಂಕಲ್ಪದಲ್ಲಿದ್ದ ವಿಹಿಂಪ, 1990ರಲ್ಲೇ ಕಾರ್ಯಶಾಲಾವನ್ನು ಆರಂಭಿಸಿದ್ದು, ಅಲ್ಲಿ ಮಂದಿರ ನಿರ್ಮಾಣಕ್ಕೆ ಅಗತ್ಯವಿರುವ ಕಂಬಗಳ ಕೆತ್ತನೆ ಕಾರ್ಯ ಭರದಿಂದ ಸಾಗಿದೆ.

ಸಿಎಂಗಳ ಜತೆಗೆ ಶಾ ಮಾತು
ತೀರ್ಪು ಶನಿವಾರ ಪ್ರಕಟವಾಗಲಿದೆ ಎಂದು ಗೊತ್ತಾದ ತತ್‌ಕ್ಷಣವೇ ಗೃಹ ಸಚಿವ ಅಮಿತ್‌ ಶಾ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳ ಜತೆಗೆ ಖುದ್ದಾಗಿ ಫೋನ್‌ನಲ್ಲಿ ಮಾತನಾಡಿದ್ದರು. ಅಗತ್ಯ ಭದ್ರತಾ ಕ್ರಮಗಳನ್ನು ಯಾವ ರೀತಿ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಖುದ್ದು ನಿರ್ದೇಶನಗಳನ್ನು ನೀಡಿದರಲ್ಲದೆ, ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಶನಿವಾರ ತಾವು ಭಾಗವಹಿಸಬೇಕಾಗಿದ್ದ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಇದರ ಜತೆಗೆ ಗೃಹ ಕಾರ್ಯದರ್ಶಿ ಅಜಯ್‌ ಕೆ. ಭಲ್ಲಾ ಸಹಿತ ಪ್ರಮುಖ ಅಧಿಕಾರಿಗಳ ಜತೆಗೆ ಹಲವು ಸುತ್ತಿನ ಭದ್ರತಾ ಸಭೆಗಳನ್ನೂ ನಡೆಸಿದ್ದರು.

ಜೈಶ್‌ನಿಂದ ಪ್ರತೀಕಾರದ ದಾಳಿ ಸಾಧ್ಯತೆ
ಅಯೋಧ್ಯೆ ತೀರ್ಪು ಬಂದ ಬಳಿಕ ದೇಶವೇ ನೆಮ್ಮದಿಯ ನಿಟ್ಟುಸಿರು ಬಿಡುತ್ತಿರುವಾಗಲೇ ಪಾಕಿ ಸ್ತಾನದ ಉಗ್ರ ಸಂಘಟನೆ ಜೈಶ್‌-ಎ- ಮೊಹಮ್ಮದ್‌ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ. ಈ ಬಗ್ಗೆ ಮಿಲಿಟರಿ ಇಂಟೆಲಿಜೆನ್ಸ್‌, ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌, ಇಂಟೆಲಿಜೆನ್ಸ್‌ ಬ್ಯೂರೋ ಮುನ್ನೆಚ್ಚರಿಕೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ‘ದ ಹಿಂದೂಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಅಯೋಧ್ಯೆ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ವಾರದಿಂದೀಚೆಗೆ ಎಲ್ಲ ರಾಜ್ಯ ಸರ್ಕಾರಗಳೂ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡುವತ್ತ ತಮ್ಮ ಚಿತ್ತ ಹರಿಸಿವೆ. ಈ ಸಂದರ್ಭದಲ್ಲೇ ಪಾಕಿಸ್ಥಾನ ಮೂಲದ ಉಗ್ರಗಾಮಿ ಸಂಘಟನೆ, ಜೈಷ್‌-ಎ-ಮೊಹಮ್ಮದ್‌ ದೇಶದಲ್ಲಿ ದೊಡ್ಡ ದಾಳಿಯೊಂದನ್ನು ನಡೆಸಲು ಸಿದ್ಧತೆ ನಡೆಸಿದೆ ಎಂದು ದೇಶದ ಪ್ರಮುಖ ಭದ್ರತಾ ಸಂಸ್ಥೆಗಳು ಕೇಂದ್ರ ಸರಕಾರವನ್ನು ಎಚ್ಚರಿಸಿವೆ.

ಕಳೆದ ಹತ್ತು ದಿನಗಳಿಂದ ‘ಡಾರ್ಕ್‌ ವೆಬ್‌’ ಮೂಲಕ ಅನುಮಾನಾಸ್ಪದ ರೀತಿಯ ಸಂದೇಶಗಳು ರವಾನೆ ಯಾಗುತ್ತಿವೆ. ಈ ಸಂದೇಶಗಳೆಲ್ಲವೂ ರಾಮ ಜನ್ಮಭೂಮಿ ತೀರ್ಪು ಮತ್ತು ಉಗ್ರ ದಾಳಿಗೆ ಸಂಬಂಧಿಸಿದವುಗಳಾಗಿವೆ ಎಂದು ಭದ್ರತಾ ಸಂಸ್ಥೆಗಳಾದ ಮಿಲಿಟರಿ ಇಂಟಲಿಜೆನ್ಸ್‌, ರಿಸರ್ಚ್‌ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ (ರಾ) ಮತ್ತು ಇಂಟಲಿಜನ್ಸ್‌ ಬ್ಯೂರೋ (ಐಬಿ) ಕೇಂದ್ರಕ್ಕೆ ಎಚ್ಚರಿಸಿವೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಡಾರ್ಕ್‌ ವೆಬ್‌ನಲ್ಲಿ ರವಾನೆಯಾಗಿರುವ ಸಂದೇಶಗಳು ;ಕೋಡೆಡ್‌’ ಮತ್ತು “ಎನ್‌ಕ್ರಿಪ್ಟೆಡ್‌’ ಮಾದರಿಯಲ್ಲಿರುವುದರಿಂದ ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಆದರೆ ಏಜೆನ್ಸಿಗಳಲ್ಲಿರುವ ಪರಿಣತರು ಕೋಡ್‌ಗಳ ಅರ್ಥ ಗ್ರಹಿಸುವಲ್ಲಿ ಸಫ‌ಲರಾಗಿದ್ದು, ಹಿಂದೆಂದಿಗಿಂತಲೂ ಅತಿ ದೊಡ್ಡ ದಾಳಿ ನಡೆಸುವ ಸಂಚು ನಡೆದಿದೆ ಎಂದು ತಿಳಿಸಿವೆ.

ವಾಟ್ಸ್‌ಆ್ಯಪ್‌ ಗ್ರೂಪ್‌ ಅಡ್ಮಿನ್‌ ಬಂಧನ
ಅಯೋಧ್ಯೆ ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಅಪ್‌ಲೋಡ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದಲ್ಲಿ ಹತ್ತು ಮಂದಿಯನ್ನು ಬಂಧಿಸಲಾಗಿದೆ. ಸಿಯೋನಿಯಲ್ಲಿ ಎಂಟು ಮಂದಿ ಮತ್ತು ಗ್ವಾಲಿಯರ್‌ನಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುತ್ತಿದ್ದ ಮಾಹಿತಿ ಮೇಲೆ ಪೊಲೀಸರ ತಂಡ ನಿಗಾ ಇರಿಸಿದ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಿಯೋನಿ ಜಿಲ್ಲೆಯಲ್ಲಿ ಪೊಲೀಸರು ವಾಟ್ಸ್‌ಆ್ಯಪ್‌ ಗ್ರೂಪ್‌ನ ಅಡ್ಮಿನ್‌ ಒಬ್ಬ ನನ್ನು ಬಂಧಿಸಲಾಗಿದೆ. ಗ್ವಾಲಿಯರ್‌ನ ಕೇಂದ್ರ ಕಾರಾಗೃಹದಲ್ಲಿ ತೀರ್ಪು ಪ್ರಕಟವಾದ ಬಳಿಕ ಪಟಾಕಿ ಸಿಡಿಸಿ ಸಂಭ್ರಮಿಸಿದ ಘಟನೆ ಹಿನ್ನೆಲೆಯಲ್ಲಿ ಜೈಲ್‌ ವಾರ್ಡನ್‌ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ.

88 ಮಂದಿಯ ಬಂಧನ
ತೀರ್ಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನುಚಿತ ಅಂಶಗಳನ್ನು ಪೋಸ್ಟ್‌ ಮಾಡಿದ ಪ್ರಕರಣದಲ್ಲಿ ಉತ್ತರ ಪ್ರದೇಶದಲ್ಲಿ 88 ಮಂದಿಯನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶದ ವಿವಿಧ ಭಾಗಗಳಲ್ಲಿ ಇದೇ ಪ್ರಕರಣಗಳಿಗೆ ಸಂಬಂಧಿಸಿದಂತೆ 37 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 12 ಎಫ್ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ನೀಡಿದ ಮಾಹಿತಿ ಪ್ರಕಾರ 3,712 ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಬರಹಗಳನ್ನು ಅಪ್‌ಲೋಡ್‌ ಮಾಡಿ, ಅಳಿಸಿ ಹಾಕಿರುವ ಪ್ರಕರಣಗಳನ್ನೂ ಗಣನೆಗೆ ತೆಗೆದು ಕ್ರಮ ಕೈಗೊಳ್ಳಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ
ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ಸಾಂವಿಧಾನಿಕ ಪೀಠದ ಇತರ ನ್ಯಾಯಮೂರ್ತಿಗಳಾಗಿರುವ ಎಸ್‌.ಎ. ಬೋಬೆx, ಡಿ.ವೈ.ಚಂದ್ರಚೂಡ್‌, ಅಶೋಕ್‌ ಭೂಷಣ್‌, ಎಸ್‌.ಅಬ್ದುಲ್‌ ನಝೀರ್‌ ಅವರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಝಡ್‌ ಪ್ಲಸ್‌ ಭದ್ರತೆ ನೀಡಲಾಗಿತ್ತು ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ. ಅವರಿಗೆ ಯಾವುದೇ ರೀತಿಯ ಬೆದರಿಕೆ ಬಂದಿರುವ ಸೂಚನೆಗಳು ಸಿಕ್ಕಿಲ್ಲವೆಂದು ಅವರು ತಿಳಿಸಿದ್ದಾರೆ. ಇದೀಗ ಸುಪ್ರೀಂ ಕೋರ್ಟ್‌ಗೆ ತೆರಳುವಾಗ ಮತ್ತು ಅಲ್ಲಿಂದ ಸರಕಾರಿ ನಿವಾಸಕ್ಕೆ ಮರಳುವಾಗ ಹೆಚ್ಚುವರಿ ಭದ್ರತಾ ಸಿಬಂದಿ ಅವರಿಗೆ ರಕ್ಷಣೆ ನೀಡುತ್ತಿದ್ದಾರೆ.

ಮೋದಿ ಸರಕಾರಕ್ಕೆ ಗೆಲುವು : ತೀರ್ಪಿನ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳ ವಿಶ್ಲೇಷಣೆ

‘ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಯು, “ಭಾರತದ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯೆ ವಿಚಾರದಲ್ಲಿ ಹಿಂದೂಗಳ ಪರವಾಗಿ ನ್ಯಾಯ ನೀಡಿದೆ. ನವಭಾರತವನ್ನು ಕಟ್ಟುವಲ್ಲಿ ಮೋದಿಯವರಿಗೆ ಇದರಿಂದ ಹೆಚ್ಚಿನ ಶಕ್ತಿ ಬಂದಂತಾಗಿದೆ’ ಎಂದು ವಿಶ್ಲೇಷಿಸಿದೆ.

ದ ವಾಷಿಂಗ್ಟನ್‌ ಪೋಸ್ಟ್‌’ ಪತ್ರಿಕೆ “ಭಾರತದ ಅತಿ ಹೆಚ್ಚು ವಿವಾದಿತವಾಗಿರುವ ಸ್ಥಳದಲ್ಲಿ ಹಿಂದೂಗಳಿಗೆ ದೇವಾಲಯ ಕಟ್ಟಲು ಭಾರತದ ಸುಪ್ರೀಂ ಕೋರ್ಟ್‌ ಅವಕಾಶ ಕಲ್ಪಿಸಿದೆ. ಮೊದಲಿನಿಂದಲೂ ಈ ಜಾಗ ತಮಗೇ ಸೇರಬೇಕೆಂದು ಪಟ್ಟು ಹಿಡಿದಿದ್ದ ಹಿಂದೂಗಳ ನಿಲುವಿಗೆ ವಿರುದ್ಧವಾಗಿ ಮುಸ್ಲಿಮರು ತಮ್ಮದೇ ಆದ ವಾದ ಮಂಡಿಸಿದ್ದರೂ, ಅಂತಿಮವಾಗಿ, ಹಿಂದೂಗಳ ನಿಲುವಿಗೇ ಜಯ ಸಿಕ್ಕಂತಾಗಿದೆ ಎಂದಿದೆ.

ಯು.ಕೆ. ಮಾಧ್ಯಮ:”ಭಾರತದ ಅತಿ ದೊಡ್ಡ ಹಾಗೂ ಅತಿ ಹಳೆಯ ಆಸ್ತಿ ವಿವಾದವು ಕೊನೆಗೂ ಬಗೆಹರಿದಿದೆ. ವಿವಾದದ ತೀರ್ಪು ಹಿಂದೂಗಳ ಪರವಾಗಿಯೇ ಬಂದಿದೆ. ಭಾರತದಲ್ಲಿ ಈಗ ತುರ್ತಾಗಿ ಆಗಬೇಕಿರುವ ಸಾಮರಸ್ಯಕ್ಕೆ ಈ ತೀರ್ಪು ನಾಂದಿ ಹಾಡುವ ನಿರೀಕ್ಷೆಯಿದೆ’ ಎಂದು ಬಿಬಿಸಿ ತಿಳಿಸಿದೆ.

ಸಿಎನ್‌ಎನ್‌ ಸುದ್ದಿಸಂಸ್ಥೆಯು, “ಪವಿತ್ರವಾದ ಸ್ಥಳದಲ್ಲಿ ಹಿಂದೂಗಳಿಗೆ ಶ್ರೀರಾಮನ ದೇಗುಲವನ್ನು ಕಟ್ಟಲು ಅನುಮತಿ ನೀಡಲಾಗಿದೆ. ಈ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಶತಮಾನಗಳಿಂದ ಚಾಲ್ತಿಯಲ್ಲಿದ್ದ ವ್ಯಾಜ್ಯವೊಂದಕ್ಕೆ ಉತ್ತರ ನೀಡಿದಂತಾಗಿದೆ’ ಎಂದು ಹೇಳಿದೆ.

“ದ ಗಾರ್ಡಿಯನ್‌’ ಪತ್ರಿಕೆಯು, ಭಾರತವನ್ನು ಕಟ್ಟುವಲ್ಲಿ ಪಿಎಂ ನರೇಂದ್ರ ಮೋದಿಯವರಿಗೆ ದೊಡ್ಡ ಗೆಲುವು ಸಿಕ್ಕಿದೆ ಎಂದು ಶ್ಲಾ ಸಿದೆ.

ಪಾಕಿಸ್ಥಾನ ಮಾಧ್ಯಮಗಳ ಆತಂಕ, ಅಸಮಾಧಾನ
ಅಯೋಧ್ಯೆ ಪ್ರಕರಣದ ತೀರ್ಪಿನ ಬಗ್ಗೆ ಪಾಕಿಸ್ಥಾನ ಮಾಧ್ಯಮಗಳು ಅಸಮಾಧಾನ ವ್ಯಕ್ತಪಡಿಸಿವೆ. “ಜಿಯೋ ಟಿವಿ’ಯು, ಬಾಬರಿ ಮಸೀದಿಯಿದ್ದ ಜಾಗವನ್ನು ಶನಿವಾರದ ತನ್ನ ತೀರ್ಪಿನಲ್ಲಿ ಭಾರತದ ಸುಪ್ರೀಂ ಕೋರ್ಟ್‌ ಹಿಂದೂಗಳಿಗೆ ನೀಡಿದೆ. ಮುಸ್ಲಿಮರಿಗೆ ತಮ್ಮ ಮಸೀದಿ ನಿರ್ಮಿಸಲು ಬೇರೊಂದು ಜಾಗ ನೀಡುವಂತೆ ಸೂಚಿಸಿದೆ ಎಂದಷ್ಟೇ ತಿಳಿಸಿದೆ. ದ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಪತ್ರಿಕೆಯು, ಪಾಶ್ಚಿಮಾತ್ಯ ಮಾಧ್ಯಮಗಳ ಶೈಲಿಯಲ್ಲೇ, “ಸುಪ್ರೀಂ ಕೋರ್ಟ್‌ನ ತೀರ್ಪು, ಮೋದಿ ಸರಕಾರಕ್ಕೆ ಸಂದ ಜಯ’ ಎಂದಿದೆ.

Comments are closed.