ರಾಷ್ಟ್ರೀಯ

ಬಾಬರಿ ಮಸೀದಿ ಧ್ವಂಸ ಅಕ್ರಮ: ಸುಪ್ರೀಂ ಕೋರ್ಟ್

Pinterest LinkedIn Tumblr


ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ೧೯೯೨ರಲ್ಲಿ ಬಾಬ್ರಿ ಮಸೀದಿಯನ್ನು ಅಕ್ರಮವಾಗಿ ಧ್ವಂಸಗೊಳಿಸಲಾಗಿದೆ. ಜಾತ್ಯತೀತ ರಾಷ್ಟ್ರದಲ್ಲಿ ಮುಂದೆಂದೂ ಇಂತಹ ಕೃತ್ಯ ನಡೆಯಕೂಡದು ಎಂದು ಸೂಚಿಸಿದೆ.

ಬಾಬ್ರಿ ಮಸೀದಿಯನ್ನು ಅಂದು ಅಕ್ರಮವಾಗಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ೫ ಎಕರೆ ಜಾಗ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸಂವಿಧಾನ ಪೀಠವು ತನ್ನ ತೀರ್ಪಿನಲ್ಲಿ ಸಂವಿಧಾನದ ಸೆಕ್ಷನ್ ೧೪೨ ರ ಅಡಿಯಲ್ಲಿ ತನ್ನ ಹಕ್ಕುಗಳನ್ನು ಚಲಾಯಿಸುವ ಮೂಲಕ ಈ ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸುವುದು ಈ ನ್ಯಾಯಾಲಯದ ಜವಾಬ್ದಾರಿಯಾಗಿದೆ ಎಂದು ಹೇಳಿದೆ.

“ಕಾನೂನು ಪಾಲಿಸುವ ಜಾತ್ಯತೀತ ರಾಷ್ಟ್ರದಲ್ಲಿ ತಮ್ಮ ಮಸೀದಿಯನ್ನು ಅಕ್ರಮ ವಿಧಾನಗಳಿಂದ ಕಳೆದುಕೊಂಡ ಮುಸ್ಲಿಂ ಸಮುದಾಯದ ಅರ್ಹತೆಯನ್ನು ನ್ಯಾಯಾಲಯ ನಿರ್ಲಕ್ಷಿಸಿದರೆ ಅದು ನ್ಯಾಯವಾಗುವುದಿಲ್ಲ. ಮುಸ್ಲಿಂ ಸಮುದಾಯದ ಪ್ರಾರ್ಥನಾ ಸ್ಥಳವನ್ನು ಅಕ್ರಮವಾಗಿ ಉರುಳಿಸಿದ್ದಕ್ಕಾಗಿ ಪರಿಹಾರವನ್ನು ನೀಡುವುದು ಅಗತ್ಯ ಇದೆ ಎಂದು ನ್ಯಾಯಪೀಠ ಹೇಳಿದೆ.

“ಮುಸ್ಲಿಮರಿಗೆ ನೀಡಲಾದ ಪರಿಹಾರದ ಸ್ವರೂಪವನ್ನು ನಿರ್ಣಯಿಸಿದ ನಂತರ, ನಾವು ಐದು ಎಕರೆ ಭೂಮಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಹಂಚಿಕೆ ಮಾಡಲು ಆದೇಶಿಸುತ್ತೇವೆ ಎಂದು ಹೇಳಿದೆ.

ಈ ಭೂಮಿಯನ್ನು ಕೇಂದ್ರ ಸರ್ಕಾರ ಅಥವಾ ಉತ್ತರ ಪ್ರದೇಶದ ರಾಜ್ಯ ಸರ್ಕಾರದ ವತಿಯಿಂದ ಅಯೋಧ್ಯೆ ನಗರದ ಗಡಿಯೊಳಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

Comments are closed.