ಲಕ್ನೋ: ರಾಮಜನ್ಮಭೂಮಿ, ಬಾಬ್ರಿ ಮಸೀದಿ ಕುರಿತು ತೀರ್ಪು ಸುಪ್ರೀಂಕೋರ್ಟ್‌ನಿಂದ ಇಂದು ಹೊರಬೀಳಲಿದ್ದು, ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಕಡೆಗಳಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಆಗ್ರಾ, ಅಲಿಗಢ, ಉತ್ತರ ಪ್ರದೇಶ,ಲಕ್ನೋ ಸೇರಿದಂತೆ ಸೂಕ್ಷ್ಮ ನಗರಗಳಲ್ಲಿ ಇಂಟರ್‌ನೆಟ್ ಸೇವೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.ಉತ್ತರ ಪ್ರದೇಶಕ್ಕೆ ಉಗ್ರರ ದಾಳಿ ಎಚ್ಚರಿಕೆ ಇರುವ ಕಾರಣ ಸಾಮಾಜಿಕ ಜಾಲತಾಗಳಲ್ಲಿ ಬರುವ ಎಚ್ಚರಿಕೆ ಸಂದೇಶ ಮುಂತಾದವುಗಳನ್ನು ಗಂಭೀರವಾಗಿ ಪರಿಗಣಿಸಲು ತಿಳಿಸಲಾಗಿದೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರದ ಶಾಲೆಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಮಾಡಲಾಗಿದೆ.
ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಕುರಿತು ತೀರ್ಪು ಹೊರಬೀಳಲಿರುವುದರಿಂದ ಭದ್ರತಾ ಕ್ರಮಗಳ ಭಾಗವಾಗಿ, ಅಯೋಧ್ಯೆಯ ನಂತರದ ತೀರ್ಪಿನ ನಂತರ ಯಾವುದೇ ಅಗತ್ಯವಿದ್ದಲ್ಲಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತಿದೆ.
ಇಂದು ಅಯೋಧ್ಯೆ ಪ್ರಕರಣದ ಸಂಬಂಧ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಮುಗಿದು ತೀರ್ಪು ನಿಗದಿ ಆದ ಬಳಿಕ ಅಯೋಧ್ಯೆಯಲ್ಲಿ ಕಂಡುಕೇಳರಿಯದ ಕಟ್ಟೆಚ್ಚರ ವಹಿಸಲಾಗಿದೆ. ಉತ್ತರಪ್ರದೇಶದ್ಯಾಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 4 ಸಾವಿರ ಅರೆಸೇನಾ ಪಡೆ ಯೋಧರನ್ನ ನಿಯೋಜಿಸಲಾಗಿದೆ.
ತೀರ್ಪು ಹೊರಬರುವ ಮುನ್ನವೇ ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಸಿಜೆಐ ರಂಜನ್ ಗೋಗೋಯ್, ನ್ಯಾ. ಎಸ್ ಎ ಬೋಬ್ಡೆ, ನ್ಯಾ. ಅಶೋಕ್ ಭೂಷಣ್ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಅಯೋಧ್ಯೆಯಲ್ಲಿ ತೀವ್ರ ಕಟ್ಟೆಚ್ಚರ:
ಅಯೋಧ್ಯೆಯಲ್ಲಿ ಬಹುಹಂತಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ಅವಲೋಕಿಸಲು ಡ್ರೋಣ್‍ಗಳ ಬಳಕೆ ಕೂಡ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಭಯೋತ್ಪಾದಕ ನಿಗ್ರಹ, ಬಾಂಬ್ ನಿಷ್ಕ್ರೀಯ ದಳ, ಕ್ಷಿಪ್ರ ಕಾರ್ಯಪಡೆಯನ್ನು ನಗರದಲ್ಲಿ ನಿಯೋಜಿಸ ಲಾಗಿದೆ. ತುರ್ತು ಸ್ಥಿತಿಯಲ್ಲಿ ಬಳಿಸಲು 2 ಹೆಲಿಕಾಪ್ಟರ್ ಗಳ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಹೆಜ್ಜೆ ಹೆಜ್ಜೆಗೂ ಸೇನಾಪಡೆಗಳ ಕಾರ್ಯನಿರ್ವಹಿಸುತ್ತಿದೆ.
ಇಂಟರ್‌ನೆಟ್ ಸೇವೆ ಸ್ಥಗಿತ
ಅಷ್ಟೇ ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಪ್ರಚೋದನಕಾರಿ ಪೋಸ್ಟ್, ಸಂದೇಶ ಹರಬಾರದೆಂದು ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾವಹಿಸಲಾಗಿದೆ. ಹೊರ ರಾಜ್ಯಗಳಿಂದ ಬರುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಗಲಭೆಗಳಾದರೆ ಬಂಧಿತರನ್ನು ಇಡಲು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ 8 ತಾತ್ಕಾಲಿಕ ಜೈಲುಗಳ ನಿರ್ಮಾಣವಾಗಿದೆ.
ಅಧಿಕಾರಿಗಳ ರಜೆ ರದ್ದು
ಸಂಭಾವ್ಯ ಪರಿಸ್ಥಿತಿ ಎದುರಿಸಲು ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನ. 30ರವರೆಗೆ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ. ಸೋಮವಾರದವರೆಗೆ ಉತ್ತರ ಪ್ರದೇಶದ ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಧಾರ್ಮಿಕ ಸ್ಥಳದಲ್ಲಿರೋ ರೈಲ್ವೆ ನಿಲ್ದಾಣಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ. ಸುಪ್ರೀಂಕೋರ್ಟ್‌ನಿಂದ ಅಯೋಧ್ಯೆ ತೀರ್ಪು ಬರಲಿರುವ ಕಾರಣ ಹೆಲಿಕಾಪ್ಟರ್ ಸಿದ್ಧತೆ ಹಾಗೂ 24/7 ನಿಯಂತ್ರಣ ಕೊಠಡಿಯನ್ನು ತೆರಯಲಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯಾವುದೇ ಕಾರಣಕ್ಕೂ ದೇಶದ ಕಾನೂನು ಸುವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲೂ ಕಟ್ಟೆಚ್ಚರ
ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ನಡೆಯಬೇಕಿದ್ದ ಎಲ್ಲಾ ವಿವಿಗಳ ಪರೀಕ್ಷೆಗಳು ಮುಂದೂಡಲಾಗಿದೆ. ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್‍ಗಳು, ಕ್ಯಾಬ್, ಟ್ಯಾಕ್ಸಿ, ಆಟೋಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
Comments are closed.