ರಾಷ್ಟ್ರೀಯ

ಅಯೋಧ್ಯೆ ಪ್ರಕರಣ : ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವೀಕರಿಸುವಂತೆ ಆರ್‌ಎಸ್‌ಎಸ್ ಮನವಿ

Pinterest LinkedIn Tumblr

ನವದೆಹಲಿ: ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ಅದಕ್ಕೂ ಮುನ್ನ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಬುಧವಾರ ಟ್ವೀಟ್‌ ಮಾಡಿದ್ದು, ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವೀಕರಿಸುವಂತೆ ಮನವಿ ಮಾಡಿದೆ. ತೀರ್ಪಿನ ನಂತರ ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯಕ್ಕೆ ತೊಂದರೆಯಾಗಬಾರದು ಎಂದು ಆರ್‌ಎಸ್‌ಎಸ್ ಟ್ವೀಟ್‌ನಲ್ಲಿ ತಿಳಿಸಿದೆ.

ಆರ್‌ಎಸ್‌ಎಸ್ ನವಂಬರ್ ತಿಂಗಳಿನ ತನ್ನೆಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಅಲ್ಲದೆ ಸುಪ್ರೀಂಕೋರ್ಟಿನ ತೀರ್ಪಿಗೂ ಮೊದಲೇ ತಮ್ಮ ಪ್ರವಾಸದ ವೇಳಾಪಟ್ಟಿಯನ್ನು ರದ್ದುಗೊಳಿಸುವಂತೆ ತನ್ನ ಕಾರ್ಯಕರ್ತರನ್ನು ಕೇಳಿಕೊಂಡಿದೆ ಎಂದು ತಿಳಿದುಬಂದಿದೆ. ಹರಿದ್ವಾರದಲ್ಲಿ ಅಕ್ಟೋಬರ್ 31 ರಿಂದ ನವೆಂಬರ್ 5 ರವರೆಗೆ ನಿಗದಿಯಾಗಿದ್ದ ಸಭೆಯನ್ನೂ ಆರ್‌ಎಸ್‌ಎಸ್ ರದ್ದುಗೊಳಿಸಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಸಂಘಟನೆಯ ಇತರ ಉನ್ನತ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಲಾಗಿತ್ತು.

ಏತನ್ಮಧ್ಯೆ, ದೆಹಲಿಯಲ್ಲಿ ಮೋಹನ್ ಭಾಗವತ್ ಮತ್ತು ಭೈಯಾಜಿ ಜೋಶಿ ಸೇರಿದಂತೆ ಆರ್‌ಎಸ್‌ಎಸ್ ನಾಯಕರ ಸಭೆ ನಡೆಯುತ್ತಿದೆ. ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. ಗೃಹ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕೂಡ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಅಕ್ಟೋಬರ್ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ಪ್ರಕರಣದ ತೀರ್ಪಿನ ನಂತರ ಶಾಂತಿ ಕಾಪಾಡುವಂತೆ ಜನರಿಗೆ ಮನವಿ ಮಾಡಿದ್ದರು. 2010 ರಲ್ಲಿ ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪನ್ನು ನೀಡಿದ ನಂತರ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜವು ಜನರನ್ನು ಒಗ್ಗೂಡಿಸಲು ಹೇಗೆ ಸಂಯಮದ ಹೇಳಿಕೆಗಳನ್ನು ನೀಡಿದೆ ಎಂದು ಪಿಎಂ ಮೋದಿ ತಮ್ಮ ‘ಮನ್ ಕಿ ಬಾತ್’ ಭಾಷಣದಲ್ಲಿ ನೆನಪಿಸಿಕೊಂಡಿದ್ದರು.

ಆ ಸಮಯದಲ್ಲಿ ಕೆಲವು ಜನರು ಮತ್ತು ಗುಂಪುಗಳು ತಮ್ಮ ಅನುಕೂಲಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಿದರು ಎಂದು ಮೋದಿ ಹೇಳಿದ್ದಾರೆ. “ಸೆಪ್ಟೆಂಬರ್ 2010 ರಲ್ಲಿ ಅಲಹಾಬಾದ್ ಹೈಕೋರ್ಟ್ ರಾಮ್ ಜನ್ಮಭೂಮಿಯ ಬಗ್ಗೆ ತೀರ್ಪು ನೀಡಿದಾಗ… ಆ ದಿನಗಳನ್ನು ನೆನಪಿಸಿಕೊಳ್ಳಿ, ಎಷ್ಟು ಜನರು ಮತ್ತು ಗುಂಪುಗಳು ತಮ್ಮ ಅನುಕೂಲಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸಿದರು. ಉದ್ವಿಗ್ನ ಪರಿಸ್ಥಿತಿಯನ್ನು ಉಂಟುಮಾಡಲು ಹೇಗೆ ಪ್ರಚೋದಿತ ಹೇಳಿಕೆಗಳನ್ನು ನೀಡಿದ್ದರು ಎಂಬುದನ್ನು ನೆನಪಿಸಿಕೊಳ್ಳಿ” ಎಂದು ಅವರು ಹೇಳಿದರು.

“ಆ ಸಮಯದಲ್ಲಿ ಜನರು ಗಮನ ಸೆಳೆಯುವ ಏಕೈಕ ಉದ್ದೇಶವನ್ನು ಹೊಂದಿದ್ದರು ಮತ್ತು ಯಾವ ರೀತಿಯ ಬೇಜವಾಬ್ದಾರಿಯುತ ಮಾತುಗಳು ತೇಲುತ್ತಿದ್ದವು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಸನ್ನಿವೇಶವು ಐದು ದಿನಗಳು ಅಥವಾ ಹತ್ತು ದಿನಗಳವರೆಗೆ ಮಾತ್ರ ಮುಂದುವರೆಯಿತು” ಎಂದು ಅವರು ಹೇಳಿದರು.

Comments are closed.