ರಾಷ್ಟ್ರೀಯ

ಯುರೋಪ್ ಒಕ್ಕೂಟದ 23 ಸಂಸದರ ತಂಡ ಶ್ರೀನಗರದಿಂದ ಎರಡು ದಿನಗಳ ಪ್ರವಾಸ ಶುರು

Pinterest LinkedIn Tumblr

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಸಂವಿಧಾನದಲ್ಲಿ ಕೊಡಲಾಗಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಅಲ್ಲಿನ ವಸ್ತುಸ್ಥಿತಿಯನ್ನು ನೇರವಾಗಿ ಅರಿತುಕೊಳ್ಳುವುದಕ್ಕಾಗಿ ಯುರೋಪ್ ಒಕ್ಕೂಟದ 23 ಸಂಸದರ ತಂಡ ಮಂಗಳವಾರ ಶ್ರೀನಗರ ತಲುಪಿದೆ.

ಅವರ ಎರಡು ದಿನಗಳ ಪ್ರವಾಸ ಶುರುವಾಗಿದ್ದು, ಜಮ್ಮು-ಕಾಶ್ಮೀರದ ವಿವಿಧ ಭಾಗಗಳಿಗೆ ತೆರಳಿ ವಸ್ತುಸ್ಥಿತಿ ಅಧ್ಯಯನ ಮಾಡಲಿದ್ದಾರೆ. ವಿವಿಧ ಸಮುದಾಯಗಳ ಜನರನ್ನು ಅವರು ಸ್ಥಳದಲ್ಲಿ ಭೇಟಿ ಮಾಡಲಿದ್ದು, ಅವರಿಂದ ಮಾಹಿತಿಯನ್ನೂ ಪಡೆದುಕೊಳ್ಳಲಿದ್ದಾರೆ.

ಭಾರತಕ್ಕೆ ಆಗಮಿಸಿದ ಈ ತಂಡದಲ್ಲಿ 27 ಸಂಸದರಿದ್ದರು. ಈ ಪೈಕಿ ನಾಲ್ವರು ಕಾಶ್ಮೀರಕ್ಕೆ ತೆರಳಲಾಗದೆ ಸ್ವದೇಶಕ್ಕೆ ಮರಳಿದ್ದಾರೆ. ಈ ತಂಡದಲ್ಲಿರುವವರು ಯುರೋಪ್​ನ ಬಲಪಂಥೀಯ ರಾಜಕಾರಣಿಗಳು ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರ ಕಳೆದ ಆಗಸ್ಟ್​ 5ರಂದು ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದುಗೊಳಿಸಿದ ನಂತರದಲ್ಲಿ ಅಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ಅಂತಾರಾಷ್ಟ್ರೀಯ ತಂಡ ಇದಾಗಿದೆ. ಸೋಮವಾರ ಈ ತಂಡ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಇದೇ ವೇಳೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದ ಪಿಎಂಒ, ದೇಶದ ನಾನಾ ಭಾಗಗಳಿಗೆ ಈ ತಂಡ ಭೇಟಿ ಮಾಡಲಿದ್ದು, ವೈವಿಧ್ಯಮಯ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಲಿದೆ. ವಿಶೇಷವಾಗಿ ಜಮ್ಮು-ಕಾಶ್ಮೀರ, ಲಡಾಕ್​ ಭಾಗದಲ್ಲಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಅವರು ಅರ್ಥಮಾಡಿಕೊಳ್ಳಲಿದ್ದಾರೆ ಎಂದು ಆಶಾವಾದ ವ್ಯಕ್ತಪಡಿಸಿತ್ತು.

Comments are closed.