ರಾಷ್ಟ್ರೀಯ

ಅಪಾಯದ ಅಂಚಿನಲ್ಲಿ ರಾಷ್ಟ್ರ ರಾಜಧಾನಿಯ ವಾತಾವರಣ; ಇನ್ನೂ ಉಸಿರಾಡುವುದೂ ಕಷ್ಟ!

Pinterest LinkedIn Tumblr


ದೆಹಲಿ (ಅಕ್ಟೋಬರ್ 28); ಮಿತಿ ಮೀರಿದ ವಾಯು ಮಾಲಿನ್ಯದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು, ಇನ್ನೂ ಈ ನಗರದಲ್ಲಿ ಬದುಕುವುದಿರಲಿ ಉಸಿರಾಡುವುದೂ ಕಷ್ಟ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಭಾನುವಾರ ದೆಹಲಿಯ ಹಾಪುರ್ ನಗರದ ಗಾಳಿಯ ಗುಣಮಟ್ಟ ಸೂಚ್ಯಾಂಕ (air quality index) ಬಿಡುಗಡೆ ಮಾಡಿದ್ದು, ಸೂಚ್ಯಾಂಕದಲ್ಲಿ ದೆಹಲಿಯ ವಾಯು ಮಾಲಿನ್ಯ ಪ್ರಮಾಣ 657ನ್ನೂ ದಾಟಿದೆ. ಈ ಮೂಲಕ ಭಾರತದಲ್ಲೇ ಅತ್ಯಂತ ಕೆಟ್ಟ ವಾತಾವರಣ ಮತ್ತು ಅತೀ ಕಡಿಮೆ ಆಮ್ಲಜನಕ ಹೊಂದಿರುವ ನಗರ ಎಂಬ ಕುಖ್ಯಾತಿಗೆ ರಾಷ್ಟ್ರ ರಾಜಧಾನಿ ಒಳಗಾಗಿದೆ.

ಗಾಳಿಯ ಗುಣಮಟ್ಟ ಸೂಚ್ಯಾಂಕ (air quality index) 50ರ ಒಳಗಿದ್ದರೆ ಅದನ್ನು ಉತ್ತಮ ಮತ್ತು ಬದುಕಲು ಅನುಕೂಲಕರ ವಾತಾವರಣ ಎನ್ನಲಾಗುತ್ತದೆ. ಈ ಪ್ರಮಾಣ 100 ಅಥವಾ 150 ನ್ನು ದಾಟಿದರೆ ಅಂತಹ ವಾತಾವರಣದಲ್ಲಿ ಬದುಕಲು ಸಾಧ್ಯವಿಲ್ಲ. ಈ ಪ್ರಮಾಣಕ್ಕಿಂತ ಹೆಚ್ಚಾದರೆ ಮನುಷ್ಯರು ಶ್ವಾಸಕೋಶ ಮತ್ತು ಕ್ಯಾನ್ಸರ್ ಸಂಬಂಧಿ ಹಲವಾರು ಖಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಆದರೆ ದೆಹಲಿಯಲ್ಲಿ ಈ ಪ್ರಮಾಣ 650ನ್ನೂ ದಾಟಿದೆ. ದೀಪಾವಳಿ ಹಬ್ಬದ ದಿನದಂದೇ ಈ ಪ್ರಮಾಣದ ವಾಯು ಮಾಲಿನ್ಯ ದಾಖಲಾಗಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿ ಪರಿಣಮಿಸಿದೆ.

ಮಿತಿಮೀರಿದ ವಾಯು ಮಾಲಿನ್ಯ ಹಾಗೂ ಅರಣ್ಯನಾಶ ಈ ಎಲ್ಲಾ ಸಮಸ್ಯೆಗೂ ಕಾರಣ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ವಾಯು ಮಾಲಿನ್ಯವನ್ನು ತಡೆಯುವ ಸಲುವಾಗಿ ದೆಹಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಆದರೂ, ಸಹ ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

ಭಾರತ ಮತ್ತು ಚೀನಾದಲ್ಲಿ ದಿನೇ ದಿನೇ ವಾಯು ಮಾಲಿನ್ಯ ಅಧಿಕವಾಗುತ್ತಿದ್ದು ಇದು ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಹೀಗಾಗಿ ವಾಯ ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ವಿಶ್ವಸಂಸ್ಥೆ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಒಕ್ಕೂಟಗಳು ಭಾರತದ ಮೇಲೆ ಒತ್ತಡ ಹೇರುತ್ತಲೇ ಇವೆ. ಆದರೆ, ಭಾರತ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ.

ಇನ್ನೂ ಭಾರತದಲ್ಲೇ ಅತ್ಯಂತ ಉತ್ತಮ ವಾತಾವರಣ ಹೊಂದಿರುವ ಬೃಹತ್ ನಗರಗಳ ಪಟ್ಟಿಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಆದರೆ, ದಿನೇ ದಿನೇ ಹೆಚ್ಚುತ್ತಿರುವ ವಾಯು ಮಾಲಿನ್ಯ ಬೆಂಗಳೂರು ಸಹ ಭವಿಷ್ಯದ ದೆಹಲಿಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ.

Comments are closed.