
ಹೈದರಾಬಾದ್: ಆನ್‍ಲೈನ್‍ನಲ್ಲಿ ಆರ್ಡರ್ ಮಾಡಿದ ಆಹಾರವನ್ನು ಮುಸ್ಲಿಂ ಡೆಲಿವರಿ ಬಾಯ್ ತಂದು ಕೊಟ್ಟ ಎಂಬ ಕಾರಣಕ್ಕೆ ಗ್ರಾಹಕ ಅದನ್ನು ತಿರಸ್ಕರಿಸಿದ್ದು, ಆತನ ವಿರುದ್ಧ ದೂರು ದಾಖಲಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಗ್ರಾಹಕ ಅಜಯ್ ಕುಮಾರ್ ಮೇಲೆ ಡೆಲಿವರಿ ಬಾಯ್ ಮುದಾಸೀರ್ ದೂರು ದಾಖಲಿಸಿದ್ದಾರೆ. ಅಜಯ್ ಕುಮಾರ್ ಶುಕ್ರವಾರ ಆನ್‍ಲೈನ್‍ನಲ್ಲಿ ಆಹಾರ ಆರ್ಡರ್ ಮಾಡಿದ್ದರು. ತಮಗೆ ಹಿಂದೂ ವ್ಯಕ್ತಿಯೇ ಆಹಾರ ತಂದುಕೊಡಬೇಕೆಂದು ಅವರು ಆರ್ಡರ್ ಮಾಡುವಾಗ ವಿಶೇಷವಾಗಿ ಕೇಳಿಕೊಂಡಿದ್ದರು. ಆದರೆ ಹಿಂದೂ ಡೆಲಿವರಿ ಬಾಯ್ ಇಲ್ಲದ ಕಾರಣಕ್ಕೆ ಸರಿಯಾದ ಸಮಯಕ್ಕೆ ಆಹಾರ ತಲುಪಿಸುವ ಸಲುವಾಗಿ ಮುದಾಸೀರ್ ಆಹಾರ ಡೆಲಿವರಿ ನೀಡಲು ಗ್ರಾಹಕರ ಮನೆ ಬಳಿ ಬಂದಿದ್ದರು.
ಈ ವೇಳೆ ಮನೆ ಬಾಗಿಲಿಗೆ ಆಹಾರದ ಡಬ್ಬ ತಂದ ಮುದಾಸೀರ್‍ನನ್ನು ಅಜಯ್ ಕುಮಾರ್ ನಿರ್ಲಕ್ಷಿಸಿದ್ದಲ್ಲದೆ, ಆತ ತಂದಿದ್ದ ಆಹಾರವನ್ನು ಪಡೆಯಲು ನಿರಾಕರಿಸಿ ಕಳುಹಿಸಿದ್ದಾರೆ. ಇದರಿಂದ ಬೇಸತ್ತ ಮುದಾಸೀರ್ ಗ್ರಾಹಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಆದ್ದರಿಂದ ಪೊಲೀಸರು ಗ್ರಾಹಕನ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ(ಐಪಿಸಿ) ಸಂಬಂಧಪಟ್ಟ ಸೆಕ್ಷನ್‍ನಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.
Comments are closed.