ರಾಷ್ಟ್ರೀಯ

ಸೆಕ್ಸ್​ ಸಿ.ಡಿ. ಹಗರಣ; ಛತ್ತೀಸ್​ಗಢ ಮುಖ್ಯಮಂತ್ರಿಯ ಕ್ರಿಮಿನಲ್ ವಿಚಾರಣೆಗೆ ತಡೆ ನೀಡಿದ ಸುಪ್ರೀಂ

Pinterest LinkedIn Tumblr


ನವದೆಹಲಿ: ಸೆಕ್ಸ್​ ಸಿ.ಡಿ. ಹಗರಣ ಸಂಬಂಧ ಛತ್ತೀಸ್​ಗಢ ಕಾಂಗ್ರೆಸ್​ ಸರ್ಕಾರದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವುದಕ್ಕೆ ಸುಪ್ರೀಂಕೋರ್ಟ್ ಸೋಮವಾರ ತಡೆನೀಡಿದೆ.

ಛತ್ತೀಸ್​ಗಢ ಕಾಂಗ್ರೆಸ್​ ಅಧ್ಯಕ್ಷರಾಗಿದ್ದ ಭೂಪೇಶ್​ ಬಘೇಲ್ ಅವರು 2018ರ ಸೆಪ್ಟೆಂಬರ್​ನಲ್ಲಿ ಆಗಿನ ಬಿಜೆಪಿ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ರಾಜೇಶ್ ಮುನಾತ್​ ಹೆಸರಿಗೆ ಕಳಂಕ ತರಲು ನಕಲಿ ಸೆಕ್ಸ್ ಸಿ.ಡಿ. ಬಿಡುಗಡೆ ಮಾಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣವನ್ನು ಅಂದಿನ ಸರ್ಕಾರ ಸಿಬಿಐಗೆ ವಹಿಸಿತ್ತು.

ವಘೇಲ್​ ಅವರು ಸಾಕ್ಷಿಗಳನ್ನು ಎದುರಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣದ ವಿಚಾರಣೆಯನ್ನು ಛತ್ತೀಸ್​ಗಢದಿಂದ ಬೇರೆ ರಾಜ್ಯಕ್ಕೆ ಸ್ಥಳಾಂತರಿಸಬೇಕು ಎಂದು ಸಿಬಿಐ ಸುಪ್ರೀಂಕೋರ್ಟ್​ನಲ್ಲಿ ಮನವಿ ಮಾಡಿತ್ತು. ಇಬ್ಬರು ಸಾಕ್ಷಿಗಳು ಸಿಎಂ ವಿರುದ್ಧ ಬೆದರಿಕೆ ದೂರು ದಾಖಲಿಸಿರುವುದನ್ನು ಸಿಬಿಐ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯದ ಗಮನಕ್ಕೆ ತಂದರು. ಈ ಕುರಿತು ವಿವರಣೆ ನೀಡುವಂತೆ ಬಘೇಲ್ ಅವರಿಗೆ ನೀಡಿದ ಸಿಜೆಐ ರಂಜನ್ ಗೋಗೊಯ್ ನೇತೃತ್ವದ ಪೀಠವು, ಬಘೇಲ್ ಅವರನ್ನು ಕ್ರಿಮಿನಲ್ ವಿಚಾರಣೆಗೆ ಒಳಪಡಿಸುವುದಕ್ಕೆ ತಡೆ ನೀಡಿತು.

ಕಳೆದ ವರ್ಷ ನಡೆದ ಛತ್ತೀಸ್​ಗಢ ವಿಧಾನಸಭೆ ಚುನಾವಣೆಯಲ್ಲಿ ಸತತ 15 ವರ್ಷಗಳ ಆಡಳಿತದಲ್ಲಿದ್ದ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್​​ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದ 5 ವರ್ಷಗಳಿಂದ ಛತ್ತೀಸ್‌ಗಢ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಭೂಪೇಶ್​​ ಪಕ್ಷವನ್ನು ಅಧಿಕಾರಕ್ಕೆ ತರಲು ಭಾರೀ ಶ್ರಮಿಸಿದ್ದರು. ಇವರ ಶ್ರಮದ ಪ್ರತಿಫಲವಾಗಿ ಮುಖ್ಯಮಂತ್ರಿ ಹುದ್ದೆ ಅಂಲಕರಿಸಿದ್ದರು.

Comments are closed.