ರಾಷ್ಟ್ರೀಯ

ಆರ್ಥಿಕ ಮುಗ್ಗಟ್ಟು ಮತ್ತು ನಿರುದ್ಯೋಗ ಕುರಿತು ಪಿ. ಚಿದಂಬರಮ್ ಟ್ವೀಟ್; ಇನ್ನು ಮುಂದೆ ಜೈಲಿಂದಲೇ ಪ್ರತೀ ದಿನ 2 ಟ್ವೀಟ್

Pinterest LinkedIn Tumblr


ನವದೆಹಲಿ(ಅ. 19): ದೇಶದಲ್ಲಿ ಮನೆಮಾಡಿರುವ ಆರ್ಥಿಕ ಮುಗ್ಗಟ್ಟು ಜನರಿಗೆ ಕಳವಳ ಮೂಡಿಸಿದೆ. ಆರ್ಥಿಕತೆ, ನಿರುದ್ಯೋಗ ಕುಸಿಯುತ್ತಿರುವುದನ್ನು ಹತೋಟಿಗೆ ತರಲು ಮೋದಿ ಸರ್ಕಾರ ಹರಸಾಹಸ ಮಾಡುತ್ತಿದ್ದರೂ ನಿರೀಕ್ಷಿತ ಫಲ ಸಿಗುತ್ತಿಲ್ಲ. ಕೇಂದ್ರದ ವಿರುದ್ಧ ಅನೇಕ ಅರ್ಥಶಾಸ್ತ್ರಜ್ಞರು, ವಿಪಕ್ಷ ನಾಯಕರು ಹರಿಹಾಯುತ್ತಲೇ ಇದ್ದಾರೆ. ಐಎನ್​ಎಕ್ಸ್ ಮೀಡಿಯಾ ಹಗರಣ ಸಂಬಂಧ ತಿಹಾರ ಜೈಲಿನಲ್ಲಿರುವ ಪಿ. ಚಿದಂಬರಮ್ ಅವರೂ ಕೇಂದ್ರದ ಆರ್ಥಿಕ ನೀತಿಗಳನ್ನು ಟೀಕಿಸುತ್ತಾ ಬಂದಿದ್ದಾರೆ. ಇವತ್ತಿನಿಂದ ಅವರು ನಿತ್ಯವೂ ಎರಡು ಡೋಸ್​​ಗಳನ್ನು ಕೇಂದ್ರಕ್ಕೆ ಕೊಡಲು ನಿರ್ಧರಿಸಿದ್ದಾರೆ. ಅವರ ಪರವಾಗಿ ಕುಟುಂಬ ಸದಸ್ಯರು ಇವತ್ತು ಎರಡು ಟ್ವೀಟ್ ಮಾಡಿದ್ದಾರೆ. ಇನ್ಮುಂದೆ ಪ್ರತೀ ದಿನವೂ ಆರ್ಥಿಕ ಮುಗ್ಗಟ್ಟಿನ ಬಗ್ಗೆ ತಿಳಿಸುವ ಎರಡೆರಡು ಟ್ವೀಟ್​ಗಳನ್ನು ಹಾಕಲಾಗುತ್ತದೆಯಂತೆ.

ಎರಡು ಆರ್ಥಿಕ ಸೂಚಕಗಳನ್ನ ನಿಮ್ಮ ಪರಾಮರ್ಶೆಗೇ ಬಿಡುತ್ತೇನೆ ಎಂದು ಹೇಳಿರುವ ಅವರು ಇವತ್ತಿನ 2 ಟ್ವೀಟ್​ಗಳಲ್ಲಿ ನಿರುದ್ಯೋಗ ಮತ್ತು ಗೋ ವಿಚಾರವನ್ನು ಪ್ರಸ್ತಾಪಿಸಿ ಆರ್ಥಿಕ ಸಂಕಷ್ಟಕ್ಕೆ ಸಾಕ್ಷ್ಯಗಳಾಗಿ ತೋರ್ಪಡಿಸಿದ್ದಾರೆ.

ದೇಶದ ಉದ್ಯೋಗ ಪರಿಸ್ಥಿತಿ ಬಗ್ಗೆ ನಾವು ಕೇಳಿದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ತುಂಬಾ ಕೆಟ್ಟದಾಗಿದೆ ಎಂದಿದ್ದಾರೆ. ಶೇ. 30ಕ್ಕಿಂತ ಹೆಚ್ಚು ಮಂದಿ ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನೂ ಕೆಟ್ಟದಾಗುತ್ತದೆ ಎಂದು ಆತಂಕಿತಗೊಂಡಿದ್ದಾರೆ. ಇದರರ್ಥ, ಉದ್ಯೋಗ ಬಿಕ್ಕಟ್ಟು ತೀವ್ರವಾಗಿದೆ ಎಂದು ಪಿ. ಚಿದಂಬರಮ್ ಅವರ ಮೊದಲ ಟ್ವೀಟ್​ನಲ್ಲಿ ಪ್ರಸ್ತಾಪವಾಗಿದೆ.

ಎರಡನೇ ಟ್ವೀಟ್​ನಲ್ಲಿ ಅವರು ಗೋವುಗಳ ಸಂಖ್ಯೆಯ ಅಂಕಿಅಂಶ ಉಲ್ಲೇಖಿಸಿದ್ದಾರೆ. 2012ರಿಂದ 2019ರವರೆಗೆ ದೇಶೀಯ ತಳಿಯ ಹಸುವಿನ ಸಂಖ್ಯೆ ಶೇ. 6ರಷ್ಟು ಇಳಿಮುಖವಾಗಿದೆ. ಅಂದರೆ, ಗೋವಿನ ಮೇಲೆ ಸರ್ಕಾರಕ್ಕಿರುವ ಪ್ರೀತಿ ಬರೀ ಕಾಗದಕ್ಕಷ್ಟೇ ಸೀಮಿತ. ಹಸುವಿನ ಉತ್ಪನ್ನ ಮತ್ತು ಫಲವತ್ತತೆಗೆ ಇದು ಯಾವ ಪ್ರಯೋಜನ ಮಾಡುವುದಿಲ್ಲ ಎಂದು ಈ ಟ್ವೀಟ್​ನಲ್ಲಿ ಪಿ. ಚಿದಂಬರಮ್ ಜಾಡಿಸಿದ್ದಾರೆ.

Comments are closed.