ರಾಷ್ಟ್ರೀಯ

ಅಯೋಧ್ಯೆ ವಿಚಾರಣೆ: ದಾವೆ ಹಿಂಪಡೆಯಲು ಮುಂದಾದ ಸುನ್ನಿ ವಕ್ಫ್ ಮಂಡಳಿ

Pinterest LinkedIn Tumblr


ನವದೆಹಲಿ: ವಿವಾದಿತ ಅಯೋಧ್ಯೆಯ 2.77 ಎಕರೆ ಜಾಗಕ್ಕೆ ಸಂಬಂಧಿಸಿದ ವಿಚಾರಣೆಯ ಕೊನೆಯ ದಿನವಾದ ಬುಧವಾರ ಮುಸ್ಲಿಂ ದಾವೆದಾರರಲ್ಲಿ ಒಂದು ಪಕ್ಷವಾದ ಸುನ್ನಿ ವಕ್ಫ್ ಬೋರ್ಡ್ ತಾನು ಸಲ್ಲಿಸಿದ್ದ ದಾವೆಯನ್ನು ಹಿಂಪಡೆಯುವುದಾಗಿ ತಿಳಿಸಿರುವುದಾಗಿ ಮಧ್ಯಸ್ಥಿಕೆ ನಿಯೋಗ ಸುಪ್ರೀಂಕೋರ್ಟ್ ಗೆ ಮಾಹಿತಿ ನೀಡಿದೆ ಎಂದು ಸಿಎನ್ ಎನ್ ವರದಿ ತಿಳಿಸಿದೆ.

ಈ ಬೆಳವಣಿಗೆಗೆ ಕಾರಣ ವಕ್ಫ್ ಮಂಡಳಿ ಅಧ್ಯಕ್ಷ ಝಡ್ ಎ ಫಾರುಖಿ ವಿರುದ್ಧ ಎಫ್ ಐಆರ್ ದಾಖಲಾಗಿರುವುದು ಸದಸ್ಯರೊಳಗೆ ಅಸಮಾಧಾನ ತಂದಿರುವುದಾಗಿ ವರದಿ ವಿವರಿಸಿದೆ. ವಕ್ಫ್ ಮಂಡಳಿ ಕಾನೂನು ಬಾಹಿರವಾಗಿ ಜಾಗವನ್ನು ಮಾರಾಟ ಮತ್ತು ಖರೀದಿಸಲು ಹೊರಟ ಪ್ರಕರಣದ ಬಗ್ಗೆ ಫಾರುಖಿ ವಿರುದ್ಧ ತನಿಖೆ ನಡೆಸುವಂತೆ ಉತ್ತರಪ್ರದೇಶ ಸರಕಾರ ಸಿಬಿಐಗೆ ಶಿಫಾರಸು ಮಾಡಿತ್ತು.

ತನಗೆ ಜೀವ ಬೆದರಿಕೆ ಇರುವುದಾಗಿ ಫಾರುಖಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೋಮವಾರ ಸೂಕ್ತ ಭದ್ರತೆ ಒದಗಿಸುವಂತೆ ಆದೇಶ ನೀಡಿತ್ತು. ತನಗೆ ಜೀವ ಬೆದರಿಕೆ ಇರುವುದಾಗಿ ಮಧ್ಯಸ್ಥಿಕೆ ಸಮಿತಿ ಸದಸ್ಯರಿಗೆ ಮಾಹಿತಿ ನೀಡಿದ್ದು, ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠಕ್ಕೆ ತಿಳಿಸಿದ್ದರು.

ಎಫ್ ಐಆರ್ ನಂತರದ ಬೆಳವಣಿಗೆ ಹಿನ್ನೆಲೆಯಲ್ಲಿ ಅಯೋಧ್ಯೆ ಪ್ರಕರಣದಲ್ಲಿ ಫಾರುಖಿ ಅವರು ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ. ವಿವಾದದ ಬಗ್ಗೆ ಮತ್ತೊಮ್ಮೆ ಮಾತುಕತೆ ನಡೆಸುವಂತೆಯೂ ಮಧ್ಯಸ್ಥಿಕೆ ಸಮಿತಿಗೆ ಪತ್ರ ಬರೆದಿರುವುದಾಗಿಯೂ ವರದಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿವಾದಿತ ಜಾಗದ ಕುರಿತು ಹೂಡಿದ್ದ ದಾವೆ ಹಿಂಪಡೆಯಲು ವಕ್ಫ್ ಬೋರ್ಡ್ ಸಲಹೆ ನೀಡಿದೆ. ಆದರೆ 1991ರ ಪೂಜಾ ಕಾಯ್ದೆಯನ್ವಯ ಪೂಜಾ ಸ್ಥಳವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಬೇಕು ಎಂದು ಮನವಿ ಮಾಡಿಕೊಂಡಿದೆ. ಅಲ್ಲದೇ ಅಯೋಧ್ಯೆಯಲ್ಲಿರುವ 22 ಮಸೀದಿಗಳನ್ನು ಉತ್ತರ ಪ್ರದೇಶ ಸರಕಾರ ವಶಕ್ಕೆ ಪಡೆದು ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದೆ ಎಂದು ವರದಿ ವಿವರಿಸಿದೆ.

Comments are closed.