ರಾಷ್ಟ್ರೀಯ

ಅಯೋಧ್ಯೆ -ಬಾಬ್ರಿಮಸೀದಿ ಭೂ ವಿವಾದ: ವಿಚಾರಣೆಯ ಅಂತಿಮ ದಿನ ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ

Pinterest LinkedIn Tumblr

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ -ಬಾಬ್ರಿಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ವಿಚಾರಣೆಯ ಅಂತಿಮ ದಿನವಾಗಿದ್ದ ಕಾರಣ ನಾಟಕೀಯ ಸನ್ನಿವೇಶಗಳು ಕಂಡುಬಂದವು.

ತಮ್ಮ ವಾದಗಳಿಗೆ ಬೆಂಬಲವಾಗಿ ಹಿಂದೂ ಮಹಾ ಸಭಾ ವಕೀಲರು ನ್ಯಾಯಾಲಯದಲ್ಲಿ ಪ್ರದರ್ಶಿಸಿದ ಪುಸ್ತಕ ಹಾಗೂ ನಕ್ಷೆ ಕುರಿತು ವಿವಾದ ಸೃಷ್ಟಿಯಾಯಿತು. ಮಾಜಿ ಐಪಿಎಸ್ ಅಧಿಕಾರಿ ಕಿಶೋರ್ ರಚಿಸಿರುವ ಅಯೋಧ್ಯೆ ರಿವಿಸಿಟೆಡ್ ಎಂಬ ಹೆಸರಿನ ಪುಸ್ತಕವನ್ನು ಹಿಂದೂ ಮಹಾಸಭಾ ವಕೀಲ, ವಿಕಾಸ್ ಸಿಂಗ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಸ್ಲಿಂ ಸಂಘಟನೆಗಳ ಪರ ವಕೀಲ ರಾಜೀವ್ ಧವನ್ ಪುಸ್ತಕ ಹಾಗೂ ನಕ್ಷೆಯನ್ನು ಹರಿದುಹಾಕಿದಾಗ ನ್ಯಾಯಾಲಯದಲ್ಲಿ ಕೆಲಕಾಲ ಗೊಂದಲ ಉಂಟಾಯಿತು.

1986 ರಲ್ಲಿ ರಚಿಸಲಾಗಿರುವ ಈ ಪುಸ್ತಕವನ್ನು ನ್ಯಾಯಾಲಯ ದಾಖಲೆಯನ್ನಾಗಿ ಪರಿಗಣಿಸುವುದಕ್ಕೆ ರಾಜೀವ್ ಧವನ್ ಆಕ್ಷೇಪಿಸಿದರು. ಆದರೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪುಸ್ತಕ ಮತ್ತು ನಕ್ಷೆಯನ್ನು ಹರಿದು ಹಾಕಿದ ಸುನ್ನಿ ವಕ್ಫ್ ಮಂಡಳಿಯ ವಕೀಲ ರಾಜೀವ್ ಧವನ್ ಅವರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪರಿಸ್ಥಿತಿ ಇದೇರೀತಿ ಮುಂದುವರಿದರೆ ತಾವು ನ್ಯಾಯಾಲಯದಿಂದ ಹೊರಹೋಗುವುದಾಗಿ ಸಿಜೆಐ ಗೊಗೊಯ್ ಎಚ್ಚರಿಕೆಯನ್ನೂ ನೀಡಿದರು. ಒಂದು ಹಂತದಲ್ಲಿ ವಕೀಲರು ಮತ್ತು ಮುಖ್ಯ ನ್ಯಾಯಮೂರ್ತಿಗಳ ನಡುವೆ ವಾಗ್ವಾದ ನಡೆಯಿತು. ಇದೇ ವೇಳೆ ಹಿಂದೂ ಮಹಾಸಭಾ ವಕೀಲರ ನಡೆಯಿಂದ ತಮಗೆ ಅಸಮಾಧಾನವಾಗಿದ್ದು, ವಕ್ಫ್ ಮಂಡಳಿ ಪರ ವಾದ ಮಂಡಿಸುತ್ತಿರುವ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ಮತ್ತೊಂದೆಡೆ, ಅಯೋಧ್ಯೆಯ ವಿವಾದಕ್ಕೆ ಸಂಬಂಧಿಸಿದಂತೆ ಇಂದು ವಾದ ಪ್ರತಿವಾದ ಮುಗಿದಿದ್ದು, ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಬಗ್ಗೆ ವ್ಯಾಪಕ ಕುತೂಹಲ ಕೆರಳಿಸಿದೆ.

Comments are closed.