ರಾಷ್ಟ್ರೀಯ

ಹೊಟ್ಟೆ ನೋವಿನಿಂದ ಬಳಲುತ್ತಿರುವ ಚಿದಂಬರಂ ಏಮ್ಸ್​ ಆಸ್ಪತ್ರೆಗೆ ದಾಖಲು

Pinterest LinkedIn Tumblr


ನವದೆಹಲಿ: ಸೆಪ್ಟೆಂಬರ್ 5ರಿಂದ ತಿಹಾರ್ ಜೈಲಿನಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಏಮ್ಸ್​ ಆಸ್ಪತ್ರೆಗೆ ಶನಿವಾರ ದಾಖಲಿಸಲಾಗಿದೆ.

ತಿಹಾರ್ ಜೈಲಿನಲ್ಲಿರುವ ಆರೋಪಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಸಾಮಾನ್ಯವಾಗಿ ಅವರನ್ನು ದೀನ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗುತ್ತದೆ. ಚಿದಂಬರಂ ಪ್ರಕರಣದಲ್ಲೂ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅವರನ್ನು ಏಮ್ಸ್​ ಅಥವಾ ಆರ್​ಎಂಎಲ್​ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತ್ತು. ಅದರಂತೆ ಇದೀಗ ಚಿದಂಬರಂ ಅವರನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯ ಚಿದಂಬರಂ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಎರಡು ವಾರಗಳ ಕಾಲ ವಿಸ್ತರಿಸಿತ್ತು. ಹೀಗಾಗಿ ಅವರು ಅಕ್ಟೋಬರ್ 17ರವರೆಗೂ ತಿಹಾರ್​ ಜೈಲಿನಲ್ಲೇ ಇರಬೇಕಾಗಿದೆ. ಚಿದಂಬರಂ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 15ಕ್ಕೆ ಮುಂದೂಡಿದೆ.

ಸುಪ್ರೀಂಕೋರ್ಟ್​ ಮುಂದೆ ಸಲ್ಲಿಸಿದ ಜಾಮೀನು ಅರ್ಜಿಯಲ್ಲಿ, 74 ವರ್ಷದ ಹಿರಿಯ ನಾಯಕರಾಗಿರುವ ಚಿದಂಬರಂ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿ ನೀಡುತ್ತಿರುವ ಆಹಾರ ಅವರಿಗೆ ಒಗ್ಗಿಕೊಳ್ಳದ ಕಾರಣ ಅವರು ಈಗಾಗಲೇ 4 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಚಿದಂಬರಂ ಪರ ವಕೀಲರು ಮನವಿ ಮಾಡಿದ್ದರು.

Comments are closed.