
ಚೆನ್ನೈ (ಅಕ್ಟೋಬರ್ 03); ಚಿನ್ನದ ಅಂಗಡಿಗೆ ಕನ್ನ ಕೊರೆದಿರುವ ಇಬ್ಬರು ಕಳ್ಳರು 13 ಕೋಟಿ ಮೌಲ್ಯದ 30 ಕೆ.ಜಿ ಚಿನ್ನಾಭರಣವನ್ನು ದೋಚಿಸುವ ಘಟನೆ ತಮಿಳುನಾಡಿನ ತಿರುಚ್ಚಿ ಎಂಬಲ್ಲಿ ನಡೆದಿದೆ.
ತಿರುಚ್ಚಿ ಜಿಲ್ಲೆಯ ಕೇಂದ್ರಭಾಗದಲ್ಲೇ ಇರುವ ಲಲಿತಾ ಜ್ಯುವೆಲರ್ಸ್ ಎಂಬ ಚಿನ್ನದ ಅಂಗಡಿಯ ಗೋಡೆಗೆ ಅಕ್ಟೋಬರ್. 2 ರ ಬೆಳಗ್ಗಿನ ಜಾವ 1.30 ಗಂಟೆ ಸುಮಾರಿಗೆ ಕನ್ನ ಕೊರೆದಿರುವ ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಹೀಗೆ ಒಳ ನುಸುಳಿರುವ ಕಳ್ಳರು ಜ್ಯುವೆಲರಿನಲ್ಲಿದ್ದ ಸುಮಾರು 30 ಕೆ.ಜಿ ತೂಕದ 13 ಕೋಟಿ ಮೌಲ್ಯದ 800ಕ್ಕೂ ಅಧಿಕ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮೂರು ಬಹುಮಹಡಿ ಕಟ್ಟಡವಾದ ಲಲಿತಾ ಜ್ಯವೆಲರ್ಸ್ನಲ್ಲಿ ಎಲ್ಲಾ ಕಡೆಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದೆ. ಆದರೆ ಈ ವೇಳೆ ಯಾರಿಗೂ ತಮ್ಮ ಗುರುತು ಪತ್ತೆಯಾಗದಿರಲಿ ಎಂಬ ಕಾರಣಕ್ಕೆ ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದಾರೆ. ಹೀಗಾಗಿ ಕಳ್ಳರ ಗುರುತು ಪತ್ತೆಯಾಗಿಲ್ಲ. ಆದರೆ, ಅವರು ಕಳ್ಳತನ ಮಾಡಿದ ರೀತಿ ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದ್ದು, ಕಳ್ಳರ ಜಾಣ್ಮೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಕಳ್ಳರ ಸುಳಿವನ್ನು ಹುಡುಕಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಕಳ್ಳತನವಾಗಿರುವ ಕುರಿತ ಸಿಸಿಟಿವಿ ದಾಖಲೆಗಳನ್ನು ಹೊರತು ಪಡಿಸಿ ಬೇರೆ ಯಾವ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಈ ದರೋಡೆ ಪ್ರಕರಣ ಪ್ರಸ್ತುತ ತಮಿಳುನಾಡಿನಲ್ಲಿ ತಲ್ಲಣವನ್ನೇ ಸೃಷ್ಟಿಸಿದ್ದರೆ, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
Comments are closed.