ರಾಷ್ಟ್ರೀಯ

ಸೌದಿ ಅರೇಬಿಯಾದಿಂದ ನಮ್ಮ ದೇಶದಲ್ಲಿ 7,000 ಕೋಟಿ ಹೂಡಿಕೆ

Pinterest LinkedIn Tumblr


ಹೊಸದಿಲ್ಲಿ: ಭಾರತ ಮತ್ತು ಸೌದಿ ಅರೇಬಿಯಾ ಮಧ್ಯೆ ಸಂಬಂಧ ಇನ್ನಷ್ಟು ಹತ್ತಿರವಾಗುತ್ತಿರುವಂತೆ, ಭಾರತದಲ್ಲಿ 7 ಸಾವಿರ ಕೋಟಿ ರೂ. ಹೂಡಿಕೆಗೆ ಸೌದಿ ಮುಂದಾಗಿದೆ. ಪೆಟ್ರೋಕೆಮಿಕಲ್ಸ್‌, ಮೂಲಸೌಕರ್ಯ, ಗಣಿಗಾರಿಕೆ ಇತ್ಯಾದಿ ವಲಯಗಳಲ್ಲಿ ಹೂಡಿಕೆಗೆ ಅದು ಉತ್ಸುಕವಾಗಿದೆ.

ಪಿಟಿಐ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೌದಿ ರಾಯಭಾರಿ ಡಾ| ಸೌದ್‌ ಬಿನ್‌ ಮೊಹಮ್ಮದ್‌ ಅಲ್‌ ಸತಿ ಅವರು, ಸೌದಿಗೆ ಭಾರತ ಒಂದು ಉತ್ತಮ ಹೂಡಿಕೆ ಕ್ಷೇತ್ರ. ನಮ್ಮ ಮಧ್ಯೆ ಇರುವ ದೀರ್ಘಾವಧಿ ಸಂಬಂಧ ಇನ್ನಷ್ಟು ಬಲಗೊಳ್ಳಲಿದೆ. ಎಂದು ಹೇಳಿದರು.

ಇದರೊಂದಿಗೆ ಸೌದಿಯ ಅತಿ ದೊಡ್ಡ ಪೆಟ್ರೋಲಿಯಂ ಸಂಸ್ಥೆ ಅರಾಮ್ಕೊ ರಿಲಯನ್ಸ್‌ ಇಂಡಸ್ಟ್ರೀಸ್‌ನೊಂದಿಗೆ ಭಾಗೀದಾರಿಕೆಗೆ ಉದ್ದೇಶಿಸಿದೆ ಎಂದರು. ಅಲ್ಲದೇ 2030ರ ವೇಳೆಗೆ ಉದ್ಯಮ ಮತ್ತು ವ್ಯವಹಾರ ವಿಸ್ತರಣೆಯ ದೂರದೃಷ್ಟಿಯ ಯೋಜನೆ ಸೌದಿ ಅರಸರದ್ದು. ಅದರನ್ವಯ ಭಾರತದಲ್ಲಿ ಹೂಡಿಕೆ ವೃದ್ಧಿಯಾಗಲಿದೆ.

ಸೌದಿ ಭಾರತದ ತೈಲ ಸುರಕ್ಷತೆಯ ಪ್ರಮುಖ ಕಂಬವಾಗಿದ್ದು, ಭಾರತದ ಬೇಡಿಕೆಯ ಶೇ.17ರಷ್ಟು ಕಚ್ಚಾ ತೈಲ ಮತ್ತು ಶೇ.32ರಷ್ಟು ಎಲ್‌ಪಿಜಿ ಪೂರೈಸುತ್ತಿದೆ ಎಂದರು. ಅಲ್ಲದೇ ಭಾರತ ಮತ್ತು ಸೌದಿ ಜಂಟಿ ಸಹಭಾಗಿತ್ವದಲ್ಲಿ ಮುಂದಡಿಯಿಡಬಹುದಾದ 40 ಕ್ಷೇತ್ರಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗಿದೆ.

ಸೌದಿ ಹೂಡಿಕೆ ಏಕೆ?
ಸೌದಿ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದೆ ಮತ್ತು ಭಾರತೀಯ ಉದ್ಯಮಿಗಳೂ ಸೌದಿ ಆರ್ಥಿಕತೆಗೆ ಒಂದಷ್ಟು ಕೊಡುಗೆ ನೀಡುತ್ತಿದ್ದಾರೆ. ಜಗತ್ತಿನಲ್ಲೇ ಅತಿ ವೇಗವಾಗಿ ವೃದ್ಧಿಯಾಗುತ್ತಿರುವ ಆರ್ಥಿಕತೆ ಭಾರತದ್ದಾಗಿದ್ದು, ಆದ್ದರಿಂದ ಹೂಡಿಕೆ ಮೂಲಕ ಪ್ರಯೋಜನ ಪಡೆಯಲು ಸೌದಿ ಮುಂದಾಗಿದೆ.

ಹೆಚ್ಚು ಉದ್ಯಮಗಳನ್ನು ಸ್ಥಾಪಿಸಬಹುದಾದ ಅನುಕೂಲಕರ ವಾತಾವರಣ ಭಾರತದಲ್ಲಿರುವುದರಿಂದ ಸೌದಿ ಸರಕಾರ ಹೆಚ್ಚು ಉತ್ಸಾಹದಲ್ಲಿದೆ. ಭಾರತವೂ ಸೌದಿಯ ಈ ಹೂಡಿಕೆಗೆ ಸ್ವಾಗತ ಕೋರುತ್ತಿದ್ದು, ಉದ್ಯೋಗಾವಕಾಶ, ಮೂಲಸೌಕರ್ಯ ವೃದ್ಧಿಯ ಆಶಯ ಹೊಂದಿದೆ.

Comments are closed.