ರಾಷ್ಟ್ರೀಯ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಡಿ ಕಚೇರಿಗೆ ಹೋಗದಿರಲು ನಿರ್ಧರಿಸಿರುವ ಶರದ್ ಪವಾರ್

Pinterest LinkedIn Tumblr

ಮುಂಬೈ: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರು ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದ ಶರದ್ ಪವಾರ್ , ಇದೀಗ ತಮ್ಮ ಯೋಚನೆಯನ್ನು ಬದಲಾಯಿಸಿಕೊಂಡಿದ್ದು, ಇಡಿ ಕಚೇರಿಗೆ ಹೋಗದಿರಲು ನಿರ್ಧರಿಸಿದ್ದಾರೆ.

ಮುಂಬೈ ಪೊಲೀಸ್ ಆಯುಕ್ತ ಸಂಜಯ್ ಬಾರ್ವೆ ಇಂದು ಪವರ್ ನಿವಾಸಕ್ಕೆ ಭೇಟಿ ನೀಡಿ, ಕಾನೂನು ಸುವ್ಯವಸ್ಥೆ ಬಿಗಡಾಯಿಸುವ ಹಿನ್ನೆಲೆಯಲ್ಲಿ ಇಡಿ ಕಚೇರಿಗೆ ಭೇಟಿ ನೀಡದಂತೆ ಮನವಿ ಮಾಡಿದ ಬೆನ್ನಲ್ಲೇ , ಶರದ್ ಪವರ್ ಈ ನಿರ್ಧಾರ ಕೈಗೊಂಡಿದ್ದಾರೆ.

ಜಾರಿ ನಿರ್ದೇಶನಾಲಯದಿಂದ ಸಮನ್ಸ್ ನೀಡದಿದ್ದರೂ ಇಂದು ಮಧ್ಯಾಹ್ನ 2 ಗಂಟೆಗೆ ಇಡಿ ಕಚೇರಿಗೆ ಭೇಟಿ ನೀಡುವುದಾಗಿ ಪವಾರ್ ಘೋಷಣೆ ಮಾಡಿದ್ದರು.

ಜಾರಿ ನಿರ್ದೇಶನಾಲಯದ ಕ್ರಿಯಾ ವಿವಾದದಲ್ಲಿ ತಮ್ಮನ್ನು ಬೆಂಬಲಿಸಿದ ಕಾಂಗ್ರೆಸ್ ಹಾಗೂ ಶಿವಸೇನೆ ಪಕ್ಷಗಳಿಗೆ ಪವಾರ್ ಕೃತಜ್ಞತೆ ಸಲ್ಲಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಪ್ರತಿಪಕ್ಷಗಳ ನಾಯಕರನ್ನು ಗುರಿ ಮಾಡಿರುವುದು ಜಾರಿ ನಿರ್ದೇಶನಾಲಯದ ಕ್ರಿಯೆಯಿಂದಲೇ ಮನವರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಜಾರಿ ನಿರ್ದೇಶನಾಲಯದ ಕಚೇರಿಗೆ ಭೇಟಿ ನೀಡದಂತೆ ಶರದ್ ಪವಾರ್ ಅವರಿಗೆ ಮುಂಬೈ ಪೊಲೀಸ್ ಆಯುಕ್ತ ಹಾಗೂ ಜಂಟಿ ಪೊಲೀಸ್ ಆಯುಕ್ತರು ಮನವಿ ಮಾಡಿರುವುದಾಗಿ ಎನ್ ಸಿಪಿ ಮುಖಂಡ ಜಿತೇಂದ್ರ ಅವ್ಹಾದ್ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Comments are closed.