ರಾಷ್ಟ್ರೀಯ

ಅತ್ಯಾಚಾರಿಗಳ ವಿಚಾರಣೆಗೆ 1,023 ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌

Pinterest LinkedIn Tumblr


ಹೊಸದಿಲ್ಲಿ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಪ್ರಕರಣಗಳ ವಿಚಾರಣೆಗೆ 1,023 ವಿಶೇಷ ತ್ವರಿತ ನ್ಯಾಯಾಲಯಗಳ ಸ್ಥಾಪನೆಗೆ ಕೇಂದ್ರ ಸರಕಾರ ಮುಂದಾಗಿದೆ. ಈ ಮೂಲಕ ಇನ್ನು ಮುಂದೆ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಪೋಕ್ಸೊ ಕಾಯಿದೆಯಡಿ ದಾಖಲಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಸಿಗುವ ನಿರೀಕ್ಷೆ ಇದೆ.

ಹೊಸ ಕೋರ್ಟ್‌ಗಳ ಪೈಕಿ ಪ್ರತಿ ನ್ಯಾಯಾಲಯ ವರ್ಷಕ್ಕೆ ಕನಿಷ್ಠ 165 ಪ್ರಕರಣಗಳನ್ನು ಇತ್ಯರ್ಥಪಡಿಸಲಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯ ಹೇಳಿದೆ.

ಸದ್ಯ ದೇಶದಲ್ಲಿ 1,66,882 ಅತ್ಯಾಚಾರ ಮತ್ತು ಪೋಕ್ಸೊ ಪ್ರಕರಣಗಳು ಬಾಕಿ ಉಳಿದಿವೆ. ಇವುಗಳ ವಿಚಾರಣೆಗೆ 1,023 ವಿಶೇಷ ತ್ವರಿತ ನ್ಯಾಯಾಲಯಗಳು ಸ್ಥಾಪನೆಯಾಗಲಿವೆ. ಕೇವಲ ಪೋಕ್ಸೊ ಪ್ರಕರಣಗಳ ವಿಚಾರಣೆಗಾಗಿಯೇ 389 ವಿಶೇಷ ಕೋರ್ಟ್‌ಗಳು ಅಸ್ತಿತ್ವಕ್ಕೆ ಬರಲಿವೆ.

ಸದ್ಯ ದೇಶದ 389 ಜಿಲ್ಲೆಗಳಲ್ಲಿ 100ಕ್ಕಿಂತಲೂ ಹೆಚ್ಚು ಪೋಕ್ಸೊ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ಇಲ್ಲಿ ಪೋಕ್ಸೊ ಪ್ರಕರಣಗಳ ವಿಚಾರಣೆಗಾಗಿಯೇ ಕನಿಷ್ಠ ಒಂದು ವಿಶೇಷ ಕೋರ್ಟ್‌ ಸ್ಥಾಪನೆಗೆ ಸುಪ್ರೀಂ ಆದೇಶಿಸಿದೆ.

ಹೊಸ ನ್ಯಾಯಾಲಯಗಳ ಸ್ಥಾಪನೆಯೊಂದಿಗೆ 3 ತಿಂಗಳಲ್ಲಿ 41-42 ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಳಿಸುವ ಗುರಿಯನ್ನು ವಿಶೇಷ ನ್ಯಾಯಾಲಯಗಳಿಗೆ ನೀಡಲಾಗಿದೆ

ಯಾವಾಗ ಕಾರ್ಯಾರಂಭ?

2019ರ ಅಕ್ಟೋಬರ್‌ 2 ರಿಂದ ಈ ವಿಶೇಷ ನ್ಯಾಯಾಲಯಗಳು ಕಾರ್ಯಾರಂಭ ಮಾಡಲಿವೆ. ಇದಕ್ಕೆ 767 ಕೋಟಿ ರೂ. ವೆಚ್ಚ ತಗುಲಲಿದ್ದು, ನಿರ್ಭಯಾ ನಿಧಿಯಿಂದ 474 ಕೋಟಿ ದೊರೆಯಲಿದೆ.

Comments are closed.