ರಾಷ್ಟ್ರೀಯ

ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರ

Pinterest LinkedIn Tumblr


ರಾಂಚಿ (ಸೆ. 1): ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್​ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಿನ್ನೆ ರಾತ್ರಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಿಡ್ನಿ ಸೋಂಕಿನಿಂದ ಬಳಲುತ್ತಿದ್ದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ, ರಕ್ತದೊತ್ತಡ ಹಾಗೂ ಶುಗರ್ ಪ್ರಮಾಣವೂ ಸ್ಥಿರವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 71 ವರ್ಷದ ಲಾಲೂ ಪ್ರಸಾದ್ ಯಾದವ್ ಅವರನ್ನು ಬಿಹಾರದ ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ದಾಖಲಿಸಲಾಗಿದ್ದು, ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಮಾಜಿ ಸಿಎಂ ಲಾಲೂ ಪ್ರಸಾದ್ ಆರೋಗ್ಯ ಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾ. ಉಮೇಶ್ ಪ್ರಸಾದ್, ಲಾಲೂ ಪ್ರಸಾದ್ ಅವರ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜಿಎಫ್​ಆರ್​ ಸ್ಥಗಿತಗೊಂಡಿದೆ. ಅವರ ರಕ್ತದೊತ್ತಡ ಹಾಗೂ ದೇಹದಲ್ಲಿ ಸಕ್ಕರೆ ಪ್ರಮಾಣವೂ ಏರುಪೇರಾಗುತ್ತಿದೆ. ಹೀಗಾಗಿ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮೇವು ಹಗರಣ ವಿವಾದದಲ್ಲಿ ಸಿಲುಕಿದ್ದ ಲಾಲೂ ಪ್ರಸಾದ್ ಯಾದವ್ ಅವರಿಗೆ 2017ರಲ್ಲಿ ಜೈಲು ಶಿಕ್ಷೆಯಾಗಿತ್ತು. ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ಮತ್ತೊಮ್ಮೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿತ್ತು. ಲಾಲೂ ಪ್ರಸಾದ್ ಯಾದವ್ ಅಧಿಕಾರಾವಧಿಯಲ್ಲಿ​ ಮೇವು ಖರೀದಿಯಲ್ಲಿ 900 ಕೋಟಿ ರೂ. ಹಗರಣ ನಡೆಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಮೂರೂವರೆ ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ ವಿಧಿಸಲಾಗಿತ್ತು.

ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅಧಿಕಾರಾವಧಿಯಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಔಷಧಿಗಾಗಿ ಸರ್ಕಾರಿ ಖಜಾನೆಯಿಂದ ನೂರಾರು ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಆದರೆ, ಆ ಹಣವನ್ನು ಜಾನುವಾರುಗಳ ಮೇವಿಗೆ ನೀಡದೆ ಸರ್ಕಾರದ ಸಿಎಂ, ಅಧಿಕಾರಿಗಳು, ಸಚಿವರು ದುರುಪಯೋಗ ಪಡಿಸಿಕೊಂಡಿದ್ದರು. 1996ರಲ್ಲಿ 1000 ಕೋಟಿ ರೂ. ಮೇವು ಹಗರಣ ಬಯಲಿಗೆ ಬಂದಿತ್ತು. ಬಳಿಕ ಈ ಬಗ್ಗೆ ಸಿಬಿಐ ತನಿಖೆಗೆ ವಹಿಸಲಾಗಿತ್ತು. ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಲಾಲೂ ಪ್ರಸಾದ್ ಯಾದವ್ ಮನೆ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ 1997ರಲ್ಲಿ ಲಾಲೂ ಪ್ರಸಾದ್ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೂಡಲೇ ಲಾಲೂ ಪ್ರಸಾದ್ ಪತ್ನಿ ರಾಬ್ಡಿದೇವಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ಹಗರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ತೀರ್ಪು ಪ್ರಕಟವಾಗಿ ಲಾಲೂ ಪ್ರಸಾದ್​ಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

Comments are closed.