ರಾಷ್ಟ್ರೀಯ

ಬಿಜೆಪಿ, ಭಜರಂಗ ದಳ ಪಾಕಿಸ್ತಾನದ ಬೇಹುಗಾರಿಕಾ ಪಡೆ ISI ನಿಂದ ಹಣ ಪಡೆಯುತ್ತಿದೆ: ದಿಗ್ವಿಜಯ್ ಸಿಂಗ್ ಆರೋಪ

Pinterest LinkedIn Tumblr

ಭಿಂಡಿ(ಮಧ್ಯಪ್ರದೇಶ): ಭಾರತೀಯ ಜನತಾ ಪಕ್ಷ (BJP) ಹಾಗೂ ಭಜರಂಗ ದಳ ಪಾಕಿಸ್ತಾನದ ಬೇಹುಗಾರಿಕಾ ಪಡೆ ISI ನಿಂದ ಹಣ ಪಡೆಯುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಭಾರೀ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.

ಮುಸ್ಲಿಮರಿಗಿಂತಾ, ಮುಸ್ಲಿಮೇತರ ವ್ಯಕ್ತಿಗಳೇ ISI ಏಜೆಂಟರಾಗಿ ಬೇಹುಗಾರಿಕೆ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿರುವ ದಿಗ್ಗಿ, ಇದಕ್ಕಾಗಿಯೇ ISIನಿಂದ ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿರುವ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಕೇವಲ ಸೈದ್ಧಾಂತಿಕ ಸಮರವನ್ನಷ್ಟೇ ನಡೆಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ಭಾಗಿಯಾಗಿರಲಿಲ್ಲ, ಆದ್ರೆ ಇದೀಗ ಅವರು ರಾಷ್ಟ್ರೀಯತೆಯ ಪಾಠವನ್ನು ನಮಗೆ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮ್ಮು-ಕಾಶ್ಮೀರ ವಿಚಾರವಾಗಿಯೂ ಮಾತನಾಡಿದ ದಿಗ್ವಿಜಯ್ ಸಿಂಗ್, ಆಗಿನ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಶೇಖ್ ಅಬ್ದುಲ್ಲಾ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರೂ ಅವರನ್ನು ನಂಬದೇ ಇದ್ದಿದ್ದರೆ ಕಣಿವೆ ರಾಜ್ಯ ಭಾರತಕ್ಕೆ ಸೇರುತ್ತಲೇ ಇರಲಿಲ್ಲ ಎಂದು ಪ್ರತಿಪಾದಿಸಿದ್ದಾರೆ. ನಾವು ಕಾಶ್ಮೀರಿ ಜನತೆಯ ವಿಶ್ವಾಸವನ್ನು ಗಳಿಸಿಕೊಳ್ಳಬೇಕು ಎಂದು ಬುದ್ದಿವಾದ ಹೇಳಿದ್ದಾರೆ.

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಪಾಠ ಕಲಿಯಬೇಕಿದೆ ಎಂದು ದಿಗ್ವಿಜಯ ಸಿಂಗ್ ತಾಕೀತು ಮಾಡಿದ್ದಾರೆ. ಪ್ರಜಾಪ್ರಭುತ್ವ, ಕಾಶ್ಮೀರಿ ಅಸ್ಮಿತೆ ಹಾಗೂ ಮಾನವೀಯತೆಯೇ ಕಾಶ್ಮೀರ ಸಮಸ್ಯೆಗೆ ಪರಿಹಾರ ನೀಡುವ 3 ಪದಗಳು ಎಂದು ವಾಜಪೇಯಿ ಹೇಳಿದ್ದರು ಎಂಬುದಾಗಿ ದಿಗ್ವಿಜಯ್ ಸಿಂಗ್ ನೆನಪಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕಣಿವೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಗಾಣಿಸಿದ್ದಾರೆ, ಕಾಶ್ಮೀರದ ಅಸ್ಮಿತೆ ಬಗ್ಗೆ ಗಮನ ಹರಿಸಿಲ್ಲ ಹಾಗೂ ಮಾನವೀಯತೆಯನ್ನು ಮರೆಯುವ ಮೂಲಕ ಕಾಶ್ಮೀರದಲ್ಲಿ ಅನುಚ್ಛೇದ 370 ತೆಗೆದುಹಾಕಿದ್ದಾರೆ ಎಂದು ದಿಗ್ಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments are closed.