ರಾಷ್ಟ್ರೀಯ

ಪ್ರವಾಸ ರದ್ದು ಮಾಡಿ ಹಿಂತಿರುಗಬೇಡಿ : ಮೋದಿಗೆ ಜೇಟ್ಲಿ ಕುಟುಂಬಸ್ಥರು ಮಾಡಿದ ಮನವಿ

Pinterest LinkedIn Tumblr

ನವದೆಹಲಿ: ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿ ಯಾವಾಗಲೂ ಪ್ರಮುಖ ಪಾತ್ರ ವಹಿಸುತ್ತಿದ್ದ, ವಿವಿಧ ಮಿತ್ರಪಕ್ಷಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದ ಅರುಣ್ ಜೇಟ್ಲಿ ಅವರು ಸಹಜವಾಗಿಯೇ ಬಿಜೆಪಿ ಪಾಲಿಗೆ ಟ್ರಬಲ್ ಶೂಟರ್ ಆಗಿದ್ದರು. ಆದರೆ, ದೀರ್ಘಕಾಲಿಕ ಅನಾರೋಗ್ಯದಿಂದಾಗಿ ಅವರಿಂದು ನಿಧನರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಉತ್ತಮ ಸ್ನೇಹಿತರಾಗಿದ್ದ ಜೇಟ್ಲಿ ನಿಧನದ ವೇಳೆಯಲ್ಲಿ ಮೋದಿ ತ್ರಿರಾಷ್ಟ್ರಗಳ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.

ಸದ್ಯ ಯುಎಇ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸ್ವತಃ ತಾವೇ ಜೇಟ್ಲಿ ಅವರ ಕುಟುಂಬದೊಂದಿಗೆ ಫೋನ್‌ ಕರೆ ಮಾಡಿ ಮಾತನಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಕುಟುಂಬಸ್ಥರು ತಾವು ಕೈಗೊಂಡಿರುವ ಮಹತ್ಕಾರ್ಯವನ್ನು ಬಿಟ್ಟು ಭಾರತಕ್ಕೆ ಹಿಂತಿರುಗುವುದು ಬೇಡ ಎಂದು ಪ್ರಧಾನಿ ಮೋದಿಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಸರಣಿ ಟ್ವೀಟ್‌ ಮೂಲಕ ಜೇಟ್ಲಿ ಗುಣಗಾನ ಮಾಡಿದ್ದ ಮೋದಿ ಜೇಟ್ಲಿ ಅಂತ್ಯ ಸಂಸ್ಕಾರಕ್ಕೆ ಬರಬೇಕಿದ್ದರೆ ತಾವು ಕೈಗೊಂಡಿರುವ ಪ್ರವಾಸವನ್ನು ಮೊಟಕುಗೊಳಿಸಿ ಹಿಂತಿರುಗಬೇಕಿದೆ. ಆದರೆ ವಿದೇಶಕ್ಕೆ ತೆರಳಿರುವ ತಮ್ಮ ಪ್ರಮುಖ ಕಾರ್ಯಗಳನ್ನು ಬದಿಗೊತ್ತಿ ಭಾರತಕ್ಕೆ ಹಿಂತಿರುಗುವುದು ಬೇಡ ಎಂದು ಕುಟುಂಬಸ್ಥರು ಹೇಳಿದ್ದಾರೆ ಎನ್ನಲಾಗಿದೆ.

ಪ್ರಧಾನಿ ಮೋದಿ ಫ್ರಾನ್ಸ್, ಯುಎಇ ಮತ್ತು ಬಹ್ರೇನ್‌ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದು, ದೇಶದ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಬಹ್ರೇನ್‌ಗೆ ಭೇಟಿ ನೀಡುತ್ತಿದ್ದಾರೆ. ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ ಆರ್ಡರ್​ ಆಫ್​ ಝಯೆದ್​ ಅನ್ನು ಇಂದು ಪಡೆದುಕೊಳ್ಳಲಿದ್ದಾರೆ. ಫ್ರಾನ್ಸ್‌ನಿಂದ ಯುಎಇಗೆ ತೆರಳಿರುವ ಮೋದಿ ಶನಿವಾರ ನಡೆಯಲಿರುವ ಜಿ7 ಶೃಂಗದಲ್ಲಿ ಪಾಲ್ಗೊಂಡು ಬಳಿಕ ಹಿಂತಿರುಗಲಿದ್ದಾರೆ.

Comments are closed.