ರಾಷ್ಟ್ರೀಯ

ಮೋದಿ ಬರೆದ ‘ಎಕ್ಸಾಂ ವಾರಿಯರ್ಸ್’ ಓದಿ ಬೆರಗಾದ ಭೂತಾನ್ ಪ್ರಧಾನಿ

Pinterest LinkedIn Tumblr


ನರೇಂದ್ರ ಮೋದಿ ಅವರ ಬಹುಮುಖಿ ವ್ಯಕ್ತಿತ್ವದ ಬಗ್ಗೆ ಭೂತಾನ್ ಪ್ರಧಾನಿ ಡಾ. ಲೋಟೇ ಶೆರಿಂಗ್ ಗುಣಗಾನ ಮಾಡಿದ್ಧಾರೆ. ಪರೀಕ್ಷೆ, ಯೋಗ ಬಗ್ಗೆ ಮೋದಿ ಹೊಂದಿರುವ ಅಭಿಪ್ರಾಯಕ್ಕೆ ಶೆರಿಂಗ್ ಸಹಮತ ವ್ಯಕ್ತಪಡಿಸಿದ್ಧಾರೆ. ಭಾರತದ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಭೂತಾನ್ ಪ್ರಧಾನಿ ಶೆರಿಂಗ್ ಅವರು ಮೋದಿ ಬರೆದ ಎಕ್ಸಾಂ ವಾರಿಯರ್ಸ್ ಪುಸ್ತಕದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದ್ಧಾರೆ.

ಈ ಪುಸ್ತಕದಲ್ಲಿ ಪರೀಕ್ಷೆಯ ಬಗ್ಗೆ ಮೋದಿ ಅವರಿಗಿರುವ ಕಲ್ಪನೆಯನ್ನು ಭೂತಾನ್ ಪ್ರಧಾನಿಗಳು ಮೆಚ್ಚಿಕೊಂಡಿದ್ಧಾರೆ. ಅನೇಕರಿಗೆ ಜೀವನ ನಿರ್ಧಾರಕವೆನಿಸಿರುವ ಪರೀಕ್ಷೆಯ ಒಳಹೊರಗನ್ನು ನರೇಂದ್ರ ಮೋದಿ ಅವರು ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಇವರು ಬರೆದಿರುವ ವಿಚಾರಗಳು ಒಬ್ಬ ಪುಟ್ಟ ಮಗುವಿಗೂ ಅರ್ಥವಾಗುವಷ್ಟು ಸರಳವಾಗಿದೆ. ಅಷ್ಟೇ ಅಲ್ಲ ವಾಸ್ತವ ಮತ್ತು ಪ್ರಾಯೋಗಿಕವಾಗಿಯೂ ಇದೆ ಎಂದು ಡಾ. ಲೋಟೇ ಶೆರಿಂಗ್ ಅಭಿಪ್ರಾಯಪಟ್ಟಿದ್ಧಾರೆ.

ಎಕ್ಸಾಮ್ ವಾರಿಯರ್ಸ್ ಪುಸ್ತಕದಲ್ಲಿ ಅವರು ಅನೇಕ ಜೀವನಪಾಠ ತಿಳಿಸಿಕೊಡುತ್ತಾರೆ. ಪ್ರಧಾನಿಯಾಗುತ್ತೇನೆಂದು ಕನಸು ಕಾಣುವುದಿರಲಿ ತಾನು ಒಮ್ಮೆಯೂ ಕ್ಲಾಸ್ ಮಾನಿಟರ್ ಆಗಿರಲಿಲ್ಲ. ಮೋದಿ ಅವರಲ್ಲಿ ಅಂಥದ್ದೊಂದು ಸಕಾರಾತ್ಮಕತೆ ಇದೆ. ಈ ಪುಸ್ಕದಲ್ಲಷ್ಟೇ ಅಲ್ಲ ವ್ಯಕ್ತಿಗತವಾಗಿಯೂ ಮೋದಿ ಅವರದ್ದು ಸಕಾರಾತ್ಮಕ ಮನೋಭಾವನೆಯೇ ಎಂದು ಫೇಸ್​ಬುಕ್​ನಲ್ಲಿ ಶೆರಿಂಗ್ ಬರೆದುಕೊಂಡಿದ್ಧಾರೆ.

ಕೋಟ್ಯಂತರ ಜನರ ಬಗ್ಗೆ ಚಿಂತೆ ಮಾಡುವ ವ್ಯಕ್ತಿಯಾಗಿ, ಜಾಗತಿಕ ವೇದಿಕೆಯಲ್ಲಿ ಅಷ್ಟು ಜನರನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ಅವರು ಮಕ್ಕಳಿಗೆ ಪರೀಕ್ಷೆ ಎದುರಿಸುವುದು ಹೇಗೆಂದು ಪಾಠ ಹೇಳಿಕೊಡುವುದಕ್ಕೆ ಸಮಯ ಕೊಡುತ್ತಾರೆಂದರೆ ಅದು ಒಳ್ಳೆಯ ನಾಯಕನ ಲಕ್ಷಣವಲ್ಲವೇ? ನೀವು ಜ್ಞಾನಕ್ಕಾಗಿ ಓದಿದರೆ ಅಂಕಗಳು ತಾನಾಗೇ ಬರುತ್ತವೆ ಎಂದು ಮಕ್ಕಳಿಗೆ ಹೇಳುವ ಅವರು ಮೌಲ್ಯಗಳಿಗೆ ಎಷ್ಟು ಒತ್ತು ಕೊಡುತ್ತಾರೆಂಬುದು ಗೊತ್ತಾಗುತ್ತದೆ ಎಂದು ಭೂತಾನ್ ಪ್ರಧಾನಿಗಳು ನರೇಂದ್ರ ಮೋದಿ ಬಗ್ಗೆ ಮೆಚ್ಚುಗೆ ಪಟ್ಟಿದ್ದಾರೆ.

ಇದೇ ಎಕ್ಸಾಂ ವಾರಿಯರ್ಸ್ ಪುಸ್ತಕದಲ್ಲಿ ನರೇಂದ್ರ ಮೋದಿ ಅವರು ಯೋಗ ಬಗ್ಗೆ ಬರೆದಿರುವುದನ್ನೂ ಭೂತಾನ್ ಪ್ರಧಾನಿ ಉಲ್ಲೇಖಿಸಿದ್ದಾರೆ. ಒಬ್ಬ ವೈದ್ಯನಾಗಿ ನನಗೆ ಮೋದಿ ಅವರ ಆರೋಗ್ಯ ಕಾಳಜಿ ಇಷ್ಟವಾಯಿತು. ಆರೋಗ್ಯಕ್ಕೆ ಯೋಗವೂ ಒಂದು ಮಾರ್ಗವಾಗಿದೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವಾಗಿ ಪ್ರಸ್ತಾಪ ಮಾಡಿದ್ದಕ್ಕೆ ಮೋದಿ ಅವರಿಗೆ ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದವರು ಹೇಳಿದ್ದಾರೆ.

ಹಾಗೆಯೇ, ಭೂತಾನ್ ದೇಶಕ್ಕೆ ಮೋದಿ ರೂಪದಲ್ಲಿ ಒಳ್ಳೆಯ ಗೆಳೆತನ ಸಿಕ್ಕಂತಾಗಿದೆ. ಇನ್ನೆರಡು ದಿನಗಳಲ್ಲಿ ಅವರು ನಮ್ಮ ದೇಶಕ್ಕೆ ಬರುತ್ತಾರೆ. ಇದು ನಿಜಕ್ಕೂ ಹೆಮ್ಮೆಯ ವಿಚಾರ. ಎರಡೂ ದೇಶಗಳ ಗೆಳೆತನಕ್ಕೆ ಹೊಸ ಅಧ್ಯಾಯಗಳು ತೆರೆದುಕೊಳ್ಳುತ್ತಿವೆ ಎಂದು ಶೆರಿಂಗ್ ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರು ಆಗಸ್ಟ್ 17ರಿಂದ ಎರಡು ದಿನಗಳ ಕಾಲ ಭೂತಾನ್ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಪ್ರಧಾನಿಗಳು ವ್ಯಕ್ತಪಡಿಸಿರುವ ಈ ಅಭಿಪ್ರಾಯಗಳು ಗಮನಾರ್ಹವೆನಿಸಿವೆ.

Comments are closed.