ರಾಷ್ಟ್ರೀಯ

ವಿಚ್ಛೇದನಕ್ಕಾಗಿ ಗಲಾಟೆ; ಪತ್ನಿಯ ತಲೆ ಕಡಿದು, ಅದನ್ನು ಕೈಯಲ್ಲಿಡಿದು ಬೀದಿಯಲ್ಲಿ ನಡೆದ!

Pinterest LinkedIn Tumblr


ವಿಜಯವಾಡ (ಆಗಸ್ಟ್.13); ಹೆಂಡತಿಯ ನಡತೆಯ ಮೇಲೆ ಅನುಮಾನಪಟ್ಟ ಗಂಡ ಅಕೆ ವಿಚ್ಛೇದನ ನೀಡಲಿಲ್ಲ ಎಂಬ ಕಾರಣಕ್ಕೆ, ಆಕೆಯನ್ನು ಕೊಂದು ತಲೆಯನ್ನು ಕಡಿದು ರಾಜಾರೋಷವಾಗಿ ಬೀದಿಯಲ್ಲಿ ನಡೆದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.

ವಿಜಯವಾಡ ಜಿಲ್ಲೆಯ ಸಮೀಪ ಸತ್ಯ ನಾರಾಯಣಪುರ ನಿವಾಸಿ ಮಣಿ ಶಾಂತಿ ಹಾಗೂ ಪ್ರದೀಪ್ ಅವರಿಗೆ 5 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ, ಇಬ್ಬರ ನಡುವೆ ವೈಮನಸ್ಯವಿದ್ದ ಕಾರಣ ಇಬ್ಬರೂ ಬೇರೆ ಬೇರೆಯಾಗಿ ಜೀವಿಸುತ್ತಿದ್ದರು. ಅಲ್ಲದೆ. ಪತ್ನಿಯ ನಡತೆಯ ಬಗ್ಗೆ ಪ್ರದೀಪ್​ಗೆ ಅನುಮಾನ ಇತ್ತು ಎಂದು ಹೇಳಲಾಗುತ್ತಿದೆ.

ಹೀಗಾಗಿ ಪ್ರದೀಪ್ ಹೆಂಡತಿಯಿಂದ ವಿಚ್ಛೇದನ ಕೋರಿ ಪ್ರಕರಣ ದಾಖಲಿಸಿದ್ದರು. ಈ ಕಾರಣದಿಂದಾಗಿ ಇಬ್ಬರ ನಡುವೆ ಆಗಿಂದಾಗ್ಗೆ ಗಲಾಟೆ ನಡೆಯುತ್ತಲೇ ಇತ್ತು. ಈ ನಡುವೆ ಮಣಿ ಶಾಂತಿ ಸೋಮವಾರ ಕೆಲಸಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದರು.

ಅವರನ್ನು ಹಿಂಬಾಲಿಸಿಕೊಂಡು ಬಂದ ಪ್ರದೀಪ್ ಕೆಲವು ವಿಷಯಗಳ ಕುರಿತು ಮಾತನಾಡಬೇಕು ಮನೆಗೆ ಬರ್ತೀನಿ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮಣಿ ಶಾಂತಿ ತಮ್ಮ ಮನೆಯ ಹೊರಗೆ ನಿಂತು ಮಾತನಾಡಲು ಮುಂದಾಗಿದ್ದಾರೆ. ಇಬ್ಬರು ನಡುವೆ ಮಾತಿನ ಚಕಮಕಿ ತಾರಕಕ್ಕೇರಿದೆ, ಈ ಸಂದರ್ಭದಲ್ಲಿ ಪ್ರದೀಪ್ ತಾನು ತಂದಿದ್ದ ಮಚ್ಚಿನಿಂದ ಆಕೆಯನ್ನು ಮನಸ್ಸೋ ಇಚ್ಚೆ ಕೊಚ್ಚಿ ಕೊಂದಿದ್ದಾರೆ. ಪರಿಣಾಮ ಶಾಂತಿ ಘಟನೆ ನಡೆದ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.

ಶಾಂತಿ ಮೃತಪಟ್ಟ ನಂತರವೂ ಸುಮ್ಮನಾಗದ ಪ್ರದೀಪ್ ಆಕೆಯ ತಲೆಯನ್ನು ಕತ್ತರಿಸಿ ನಡುರಸ್ತೆಯಲ್ಲೇ ರಾಜಾರೋಷವಾಗಿ ಅದನ್ನು ತೆಗೆದುಕೊಂಡು ಹೋಗಿದ್ದಾರೆ. ಪರಿಣಾಮ ಭೀತಿಗೊಳಗಾದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಆಕೆಯ ತಲೆಯನ್ನು ಕಾಲುವೆಗೆ ಎಸೆದಿರುವ ಪ್ರದೀಪ್ ನಂತರ ತಾನೇ ಪೊಲಿಸರ ಬಳಿ ಶರಣಾಗಿದ್ದಾನೆ. ಈತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ಮೃತ ದೆಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Comments are closed.