ರಾಷ್ಟ್ರೀಯ

370ನೇ ವಿಧಿ ರದ್ದತಿಗೆ ಲೋಕಸಭೆಯೂ ಒಪ್ಪಿಗೆ

Pinterest LinkedIn Tumblr


ನವದೆಹಲಿ(ಆ. 06): ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿ ಮತ್ತು 35ಎ ವಿಧಿಯನ್ನು ರದ್ದು ಮಾಡುವ ನಿರ್ಣಯಕ್ಕೆ ಲೋಕಸಭೆಯ ಒಪ್ಪಿಗೆಯೂ ಸಿಕ್ಕಿದೆ. ಹಾಗೆಯೇ, ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಗೂ ಸಂಸತ್​ನ ಕೆಳಮನೆ ಒಪ್ಪಿಗೆ ನೀಡಿದೆ. ಈ ಮೂಲಕ ಕಾಶ್ಮೀರಕ್ಕೆ ಸಂಬಂಧಿಸಿದ ಈ ಎರಡು ಮಹತ್ವದ ನಿರ್ಣಯಗಳಿಗೆ ಸಂಸತ್​ನ ಎರಡೂ ಸದನಗಳ ಸಮ್ಮತಿ ಸಿಕ್ಕಂತಾಗಿದೆ. ನಿನ್ನೆ ರಾಜ್ಯಸಭೆಯಲ್ಲಿ ಇವುಗಳು ಪಾಸ್ ಆಗಿದ್ದವು.

ಕಣಿವೆ ರಾಜ್ಯವನ್ನು ಜಮ್ಮು-ಕಾಶ್ಮಿರ ಮತ್ತು ಲಡಾಖ್ ಎಂದು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆಗೆ ಲೋಕಸಭೆಯಲ್ಲಿ 370-70 ಮತಗಳ ಅಂತರದಿಂದ ಒಪ್ಪಿಗೆ ಸಿಕ್ಕಿತು.

ಈ ಮಸೂದೆ ಪಾಸ್ ಆದ ನಂತರ, ಗೃಹ ಸಚಿವ ಅಮಿತ್ ಶಾ ಅವರು ಜಮ್ಮು-ಕಾಶ್ಮೀರ ಮೀಸಲಾತಿ ಮಸೂದೆಯನ್ನು ಹಿಂಪಡೆದುಕೊಂಡರು.

ನಿನ್ನೆ ರಾಜ್ಯಸಭೆಯಲ್ಲಿ ಅಮಿತ್ ಶಾ ಮತ್ತು ಗುಲಾಂ ನಬಿ ಆಜಾದ್ ಮಧ್ಯೆ ಮಾತಿನ ಪೈಪೋಟಿ ನಡೆದಿತ್ತು. ಇವತ್ತು ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಶಶಿ ತರೂರ್, ಅಸಾದುದ್ದೀನ್ ಒವೈಸಿ ಮೊದಲಾದವರ ವಾಗ್ದಾಳಿಗೆ ಅಮಿತ್ ಶಾ ಉತ್ತರ ನೀಡಿದರು.

ಸಂವಿಧಾನದಲ್ಲಿ ನೀಡಲಾಗಿದ್ದ 370ನೇ ವಿಧಿಯಿಂದ ಕಾಶ್ಮೀರಕ್ಕೆ ಯಾವುದೇ ಅನುಕೂಲವಾಗಿಲ್ಲ. ಕಾಶ್ಮೀರಿಗಳು ಬಡತನದಲ್ಲಿ ಬದಕಲು ಇದೇ ವಿಧಿ ಕಾರಣವಾಗಿದೆ. ಇದನ್ನು ತೆಗೆದುಹಾಕುವ ಮೂಲಕ ಕಾಶ್ಮೀರದಲ್ಲಿ ಅಭಿವೃದ್ಧಿಯ ಗಾಳಿ ಬೀಸಲಿದೆ ಎಂದು ಅಮಿತ್ ಶಾ ಲೋಕಸಭೆಯಲ್ಲಿ ಹೇಳಿದರು.

ಸಂವಿಧಾನದಿಂದ 370ನೇ ವಿಧಿಯನ್ನು ತೆಗೆಯುವ ಮೂಲಕ ಕೇಂದ್ರ ಸರ್ಕಾರ ಐತಿಹಾಸಿಕ ಪ್ರಮಾದ ಎಸಗಿದೆ ಎಂದು ಅಸಾದುದ್ದೀನ್ ಒವೈಸಿ ನೀಡಿದ ಹೇಳಿಕೆಗೆ ಅಮಿತ್ ಶಾ ತಿರುಗೇಟು ನೀಡಿದರು. ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವು ಐತಿಹಾಸಿಕ ತಪ್ಪನ್ನು ಸರಿಪಡಿಸುವುದಾಗಿದೆ. 370ನೇ ವಿಧಿಯು ಮಹಿಳೆಯರ ವಿರೋಧಿಯಾಗಿದೆ, ದಲಿತರ ವಿರೋಧಿಯಾಗಿದೆ, ಆದಿವಾಸಿಗಳ ವಿರೋಧಿಯಾಗಿದೆ. ಭಯೋತ್ಪಾದಕರಿಗೆ ಲಾಭಕಾರಿಯಾಗಿದೆ ಎಂದು ಅಮಿತ್ ಶಾ ಟೀಕಿಸಿದರು.

370ನೇ ವಿಧಿಯನ್ನು ಮುಂದಿಟ್ಟು ಕಾಶ್ಮೀರಿಗಳಿಗೆ ಸುಳ್ಳು ಭರವಸೆಗಳನ್ನ ಕೊಡಲಾಗಿತ್ತು. ವಿಶೇಷ ಸ್ಥಾನಮಾನದಿಂದ ಕಾಶ್ಮೀರ ಹಾಗಾಗುತ್ತೆ, ಹೀಗಾಗುತ್ತೆ ಎಂದು ನಂಬಿಸಲಾಗಿತ್ತು. 370ನೇ ವಿಧಿಯಿಂದ ಏನೋ ಸಿಕ್ಕಿಬಿಡುತ್ತದೆಂದು ಕಾಶ್ಮೀರಿಗಳೂ ನಿರೀಕ್ಷಿಸಿದ್ದರು. ಆದರೆ, ನಿಜವಾಗಿಯೂ ಆಗಿದ್ಧೇನು? ಕಾಶ್ಮೀರಿಗಳಿಗೆ ಸಿಕ್ಕಿದ್ದು ಏನೂ ಅಲ್ಲ ಎಂದು ಗೃಹ ಸಚಿವರೂ ಆದ ಅಮಿತ್ ಶಾ ಅಭಿಪ್ರಾಯಪಟ್ಟರು.

ಜಮ್ಮು-ಕಾಶ್ಮೀರ ಅಭಿವೃದ್ಧಿಯಾಗದೇ ಬಡತನದಲ್ಲೇ ಇರಲು 370ನೇ ವಿಧಿ ಕಾರಣವಾಗಿದೆ. ಇಲ್ಲಿ ಉದ್ಯಮಗಳೇ ಇಲ್ಲ. ಇಲ್ಲಿ ಮಾರುವವರು, ಕೊಳ್ಳುವವರೂ ಎರಡೂ ವರ್ಗದವರು ಬಡವರೇ ಆಗಿದ್ದಾರೆ. ದೇಶದೆಲ್ಲೆಡೆ ಭೂಮಿಗೆ ಚಿನ್ನದ ಬೆಲೆ ಇದ್ದರೆ ಕಾಶ್ಮೀರದಲ್ಲಿ ಬೆಲೆ ಪಾತಾಳದಲ್ಲಿದೆ. 370ನೇ ವಿಧಿ ನಿರ್ಗಮನದ ಬಳಿಕ ಕಾಶ್ಮೀರದಲ್ಲಿ ಉದ್ಯಮಗಳು ಬೆಳೆಯುತ್ತವೆ, ಕಾಶ್ಮೀರಿಗಳಿಗೆ ಉದ್ಯೋಗ ಸಿಕ್ಕುತ್ತದೆ ಎಂದು ಅಮಿತ್ ಶಾ ತಿಳಿಸಿದರು.

Comments are closed.