ರಾಷ್ಟ್ರೀಯ

ಕಲಂ 370 ರದ್ದು; ಕೇಂದ್ರದ ನಿರ್ಧಾರಕ್ಕೆ ಮೈತ್ರಿಕೂಟದಲ್ಲೇ ಭಿನ್ನಮತ: ತಮ್ಮ ಬೆಂಬಲ ಇಲ್ಲ ಎಂದ ಜೆಡಿಯು!

Pinterest LinkedIn Tumblr

ನವ ದೆಹಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಮ್ಮ ಬೆಂಬಲ ಇಲ್ಲ ಎಂದು ಎನ್​ಡಿಎ ಮೈತ್ರಿ ಕೂಟದ ಪ್ರಮುಖ ಪಕ್ಷವಾದ ಜೆಡಿಯು ಸ್ಪಷ್ಟಪಡಿಸಿದೆ.

ಕಲಂ 370 ಹಾಗೂ 35ಎ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕುರಿತ ಪ್ರಸ್ತಾವನೆಯನ್ನು ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಸಭೆಯಲ್ಲಿ ಮಂಡಿಸಿದ್ದರು. ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಈ ಪ್ರಸ್ತಾವನೆ ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು.

ರಾಜ್ಯಸಭಾ ಕಲಾಪದ ನಂತರ ಈ ಕುರಿತು ಖಾರವಾಗಿ ಪ್ರತಿಕ್ರಿಯಿಸಿರುವ ಜೆಡಿಯು ಪಕ್ಷದ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಕೆ.ಸಿ. ತ್ಯಾಗಿ, “ಜಯಪ್ರಕಾಶ ನಾರಾಯಣ್, ರಾಮ್ ಮನೋಹರ್ ಲೋಹಿಯಾ ಹಾಗೂ ಜಾರ್ಜ್ ಫರ್ನಾಂಡಿಸ್ ರಂತಹ ನಾಯಕರ ಆದರ್ಶದ ದಾರಿ ಜೆಡಿಯು ಪಕ್ಷದ ತಳಹದಿ. ಪಕ್ಷದ ನಾಯಕರಾದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಈ ದಾರಿಯಲ್ಲೇ ನಡೆಯುವ ಚಿಂತಕರು. ಹೀಗಾಗಿ ಕಲಂ 370 ರದ್ದತಿಗೆ ನಮ್ಮ ಬೆಂಬಲ ಇಲ್ಲ. ರಾಜ್ಯಸಭೆಯಲ್ಲಿ ಈ ಪ್ರಸ್ತಾವನೆ ಮಂಡನೆಗೆ ನಮ್ಮ ಸಹಮತಿ ಇಲ್ಲ. ಈ ಕುರಿತು ಬೆಜೆಪಿ ಹಾಗೂ ನಮ್ಮ ಪಕ್ಷದ ನಡುವೆ ಭಿನ್ನಾಭಿಪ್ರಾಯ ಇರುವುದು ನಿಜ” ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರದಲ್ಲಿ ಆಡಳಿತದಲ್ಲಿರುವ ಜೆಡಿಯು ಪಕ್ಷ ಕಳೆದ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೊತೆಗಿನ ಮೈತ್ರಿಯೊಂದಿಗೆ ಎದುರಿಸಿತ್ತು. ಅಲ್ಲದೆ, ಕಳೆದ ಎರಡು ದಶಕಗಳಿಂದ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾಗಿ ಗುರುತಿಸಿಕೊಂಡಿದೆ.

ಅನೇಕ ವಿಚಾರದಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವೆ ಭಿನ್ನಾಭಿಪ್ರಾಯ ಇದ್ದಗ್ಯೂ ಈ ಮೈತ್ರಿ ಕಳೆದ ವರ್ಷ ಮತ್ತೆ ಒಂದಾಗಿತ್ತು. ಆದರೆ, ಜಮ್ಮು ಕಾಶ್ಮೀರದ ವಿಚಾರದಲ್ಲಿ ಈ ಎರಡೂ ಪಕ್ಷಗಳ ನಡುವಿನ ಈ ದ್ವಿಮುಖ ನೀತಿ ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ನಡುವೆ ಮತ್ತೆ ದೊಡ್ಡ ಕಂದಕಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

Comments are closed.