ರಾಷ್ಟ್ರೀಯ

ಕಾಶ್ಮೀರ ಬಿಕ್ಕಟ್ಟು: ಸರ್ವ ಪಕ್ಷಗಳ ಸಭೆ ಕರೆದ ಮೆಹಬೂಬಾ ಮುಫ್ತಿ

Pinterest LinkedIn Tumblr


ನವದೆಹಲಿ(ಆಗಸ್ಟ್​​​.04): ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಕಳೆದ ಎರಡು ವಾರಗಳ ಅಂತರದಲ್ಲಿ ಕೇಂದ್ರ ಸರ್ಕಾರವೂ 35,000 ಭದ್ರತಾ ಪಡೆ ಸಿಬ್ಬಂದಿ ಆಯೋಜಿಸಿದೆ. ಇದರಿಂದ ಸ್ಥಳೀಯರಲ್ಲಿ ಭಾರೀ ಆಂತಕ ಸೃಷ್ಟಿಯಾಗಿದೆ. ಇಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ಯಾರು ಮಾಹಿತಿ ನೀಡುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿರುವ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಭಾನುವಾರ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

“ಇಲ್ಲಿನ ಖಾಸಗಿ ಹೋಟೆಲ್​ವೊಂದರಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಆದರೆ, ಯಾವುದೇ ಸಭೆಗಳನ್ನು ಆಯೋಜಿಸುವಂತಿಲ್ಲ ಎಂದು ಪೊಲೀಸರು ನಮ್ಮ ಹೋಟೆಲ್ ಬುಕ್ಕಿಂಗ್ ರದ್ದು ಮಾಡಿಸಿದ್ದರು. ಇತ್ತ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ದಿಢೀರ್ ಸಂಪುಟ ಸಭೆ ಕರೆದಿದ್ದಾರೆ. ಅಲ್ಲದೇ ಸಂವಿಧಾನದ 370 ವಿಧಿಯ ಪ್ರಕಾರ 35(ಎ)ನೇ ಕಲಂ ಅಡಿಯಲ್ಲಿ ನಮ್ಮ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ಹಿಂಪಡೆಯುವ ಆತಂಕವನ್ನು ಸ್ಥಳೀಯ ರಾಜಕಾರಣಿಗಳು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನನ್ನ ಮನೆಯಲ್ಲೇ ಸಭೆ ಆಯೋಜಿಸಿದ್ದೇ” ಎಂದು ಮುಫ್ತಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಸಭೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಫಾರೂಕ್‌ ಅಬ್ದುಲ್ಲಾ ಸೇರಿದಂತೆ ಸರ್ವ ಪಕ್ಷಗಳ ಮುಖಂಡರು ಸಭೆ ಸೇರಿದ್ದರು. ಸಭೆಯ ಬಳಿಕ ಫಾರೂಕ್​​ ಅಬ್ದುಲ್ಲಾ ಭಾರತ ಮತ್ತು ಪಾಕಿಸ್ತಾನಕ್ಕೆ ಎಚ್ಚರಿನೆ ನೀಡಿದ್ದಾರೆ. ಇಲ್ಲಿ ಏನಾದರೂ ಸಂಭವಿಸಿದಲ್ಲಿ ನೀವೇ ಹೊಣೆ ಎಂದು ಕಿಡಿಕಾರಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಜಮ್ಮು-ಕಾಶ್ಮೀರದಿಂದ ಪ್ರವಾಸಿಗರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಕ್ರಿಕೆಟಿಗರನ್ನು ಹೊರಗೆ ಕಳುಹಿಸಲಾಗಿದೆ. ಈ ಮೂಲಕ ಆತಂಕದ ವಾತಾವರಣ ನಿರ್ಮಿಸಲಾಗಿದೆ. ಆದರೀಗ, ಕಾಶ್ಮೀರಿಗಳಿಗೆ ಯಾವುದೇ ಭರವಸೆ ನೀಡುವತ್ತ ಯಾರು ಗಮನಹರಿಸಿಲ್ಲ ಎಂದು ಮುಫ್ತಿ ಟ್ವೀಟ್​​ನಲ್ಲಿ ಕೇಂದ್ರದ ವಿರುದ್ಧ ಕುಟುಕಿದ್ದಾರೆ.

ಈಗಾಗಲೇ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್​ನಲ್ಲಿ ಪಾಕ್ ಗಡಿಭಾಗದ ಮೂಲಕ ಭಾರತದೊಳಗೆ ಒಳನುಸುಳಿ ಬಂದಿದ್ದು 5-7 ಮಂದಿಯನ್ನು ಭಾರತೀಯ ಸೇನೆ ಕೊಂದು ಹಾಕಿದೆ. ಹತರಾದವರು ಪಾಕಿಸ್ತಾನೀ ಸೇನೆಗೆ ಸೇರಿದ ಬಿಎಟಿ ತಂಡಕ್ಕೆ ಸೇರಿದವರೆಂದು ಭಾರತ ಹೇಳಿದೆ. ಕೇರನ್ ಸೆಕ್ಟರ್​ನಲ್ಲಿ ಅನಾಥವಾಗಿ ಬಿದ್ದಿರುವ ಈ ಮೃತದೇಹಗಳನ್ನು ನಿಮ್ಮ ದೇಶಕ್ಕೆ ವಾಪಸ್ ತೆಗೆದುಕೊಂಡು ಹೋಗಿ ಎಂದು ಭಾರತೀಯ ಸೇನೆ ಹೇಳಿದೆ. ಇದರ ಬಗ್ಗೆ ಪಾಕಿಸ್ತಾನಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಇಮ್ರಾನ್ ಖಾನ್ ಅವರು ಮಾಡಿರುವ ಟ್ವೀಟ್​ಗಳನ್ನು ಗಮನಿಸಿದರೆ ಅವರು ಕೇರನ್ ಸೆಕ್ಟರ್​ನಲ್ಲಿ ಹತರಾಗಿರುವ ಮಂದಿ ತಮ್ಮವರಲ್ಲ. ಬದಲಾಗಿ ಸ್ಥಳೀಯ ನಾಗರಿಕರು ಎಂದು ಪರೋಕ್ಷವಾಗಿ ತಿಳಿಸಿದಂತಿದೆ.

ಅಮರನಾಥ ಯಾತ್ರೆಯ ಮಾರ್ಗದಲ್ಲಿ ಪಾಕ್​​ ಸೇನೆಗೆ ಸೇರಿದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಯಾತ್ರಿಕರನ್ನು ಕಾಶ್ಮೀರದಿಂದ ಮರಳುವಂತೆ ಕೇಂದ್ರ ಸರ್ಕಾರ ಸೂಚನೆ ಹೊರಡಿಸಿತ್ತು. ಈ ಬೆನ್ನಲ್ಲೇ ವಿದ್ಯಾರ್ಥಿಗಳು, ಪ್ರವಾಸಿಗರು ಕಾಶ್ಮೀರದಿಂದ ಕಾಲ್ಕಿತ್ತರು. ಉಗ್ರರ ಸಂಭಾವ್ಯ ದಾಳಿಯ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಬಂದ ಕೂಡಲೇ ಭದ್ರತಾ ಪಡೆಗಳು ಗಡಿ ಭಾಗಗಳಲ್ಲಿ ಆಯೋಜನೆಗೊಂಡವು.

Comments are closed.