ರಾಷ್ಟ್ರೀಯ

ಚಂದ್ರಯಾನ-2 ಉಡಾವಣೆ: ನಭಕ್ಕೆ ಚಿಮ್ಮಿದ ‘ಬಾಹುಬಲಿ’

Pinterest LinkedIn Tumblr

ಶ್ರೀಹರಿಕೋಟ(ಆಂಧ್ರಪ್ರದೇಶ): ಭಾರತದ ಬಾಹ್ಯಾಕಾಶ ಲೋಕದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಗಗನನೌಕೆ ಸೋಮವಾರ ಅಪರಾಹ್ನ 2.43ಕ್ಕೆ ನಭಕ್ಕೆ ಚಿಮ್ಮಿದೆ.

ಬಾಹುಬಲಿ ಎಂದು ಅಡ್ಡ ಹೆಸರಿನಿಂದ ಕರೆಯಲ್ಪಡುವ ಜಿಎಸ್ಎಲ್ ವಿಎಂಕೆ 3-ಎಂ1 ಉಡಾವಣಾ ವಾಹಕ ಚಂದ್ರಯಾನ-2 ನೌಕೆಯನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ.
ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಕೊನೆ ಗಳಿಗೆಯಲ್ಲಿ ಮುಂದೂಡಲ್ಪಟ್ಟಿದ್ದ ಚಂದ್ರಯಾನ-2 ನೌಕೆಯನ್ನು ಇಂದು ಇಸ್ರೊ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಚಂದ್ರಯಾನ-2 ಹೊತ್ತು ‘ಬಾಹುಬಲಿ’ ಎಂದೇ ಹೆಸರುವಾಸಿಯಾಗಿರುವ ಇಸ್ರೋದ ‘ಜಿಎಸ್‌ಎಲ್‌ವಿ ಮಾರ್ಕ್ 3’ ರಾಕೆಟ್‌ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಭೂಮಂಡಲದತ್ತ ಚಿಮ್ಮಿದೆ. ಇಸ್ರೋ ವಿಜ್ಞಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಇದೊಂದು ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದ್ದ ಯೋಜನೆಯಾಗಿತ್ತು. ಜು.15ರಂದು ಮುಂಜಾನೆ 2.51ಕ್ಕೆ ಉಡ್ಡಯನ ಮಾಡಲು ಇಸ್ರೋ ಸಕಲ ಸಿದ್ಧತೆಗಳನ್ನೂ ನಡೆಸಿತ್ತು. ಆದರೆ, ಕೊನೇ ಕ್ಷಣದಲ್ಲಿ ರಾಕೆಟ್​ ಎಂಜಿನ್​ನಲ್ಲಿ ತಾಂತ್ರಿಕ ದೋಷ ಕಂಡಿದ್ದರಿಂದ ಉಡಾವಣೆಗೂ 56 ನಿಮಿಷ ಮೊದಲು ರದ್ದುಪಡಿಸಲಾಗಿತ್ತು. ಬಳಿಕ ಅದನ್ನೆಲ್ಲ ದುರಸ್ತಿ ಪಡಿಸಿದ್ದಾಗಿ ಎರಡು ದಿನಗಳ ಹಿಂದೆ ಇಸ್ರೋ ವಿಜ್ಞಾನಿಗಳು ತಿಳಿಸಿದ್ದರು. ಶನಿವಾರ (ಜು.20) ಎರಡು ಬಾರಿ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದಾಗಿ ಇಸ್ರೋ ಮಾಜಿ ಮುಖ್ಯಸ್ಥ ಕಿರಣ್​ಕುಮಾರ್​ ತಿಳಿಸಿದ್ದರು.

ನಿನ್ನೆಯಿಂದಲೇ ಇಸ್ರೋ ಟ್ವೀಟ್​ ಮಾಡುವ ಮೂಲಕ ಕಾಲಕಾಲಕ್ಕೆ ಚಂದ್ರಯಾನ-2 ಉಡಾವಣೆಯ ಸಿದ್ಧತೆಗಳ ಬಗ್ಗೆ ತಿಳಿಸುತ್ತಿತ್ತು.

ಇಂದು ನಭಕ್ಕೆ ಚಿಮ್ಮಿರುವ ಚಂದ್ರಯಾನ-2 ಮಿಷನ್​ ಆಗಸ್ಟ್​ 14ಕ್ಕೆ ಚಂದ್ರನ ಕಕ್ಷೆಯತ್ತ ಸಾಗಲಿದೆ. ಸೆಪ್ಟೆಂಬರ್​ 6 ಅಥವಾ 7ಕ್ಕೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲಿದೆ ಎಂದು ಕಿರಣ್​ಕುಮಾರ್​ ತಿಳಿಸಿದ್ದಾರೆ.

Comments are closed.