ರಾಷ್ಟ್ರೀಯ

ಚಂದ್ರಯಾನ 2 ಉಡಾವಣೆಗೆ ಕ್ಷಣಗಣನೆ…

Pinterest LinkedIn Tumblr

ಚೆನ್ನೈ: ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೇಲೆ ಸೋಮವಾರ ವಿಜ್ಞಾನ ಲೋಕದ ಕೌತುಕ ಮನೆಮಾಡಿದೆ.

ಭಾರತದ ಅತ್ಯಂತ ಭಾರವಾದ ರಾಕೆಟ್ ಬಾಹುಬಲಿ ಎಂದು ಅಡ್ಡ ಹೆಸರಿನಿಂದ ಕರೆಯಲ್ಪಡುವ ಜಿಎಸ್ಎಲ್ ವಿ ಎಂಕೆ 3 ಚಂದ್ರಯಾನ-2ನ್ನು ಹೊತ್ತೊಯ್ಯಲಿದ್ದು ಕೌಂಟ್ ಡೌನ್ ನಿನ್ನೆ ಸಂಜೆ 18.43ಕ್ಕೆ ಆರಂಭವಾಗಿದೆ.

ಇಂದು ಮಧ್ಯಾಹ್ನ 2.43 ಗಂಟೆಗೆ ಚಂದ್ರಯಾನ-2 ಉಡಾವಣೆಯಾಗಲಿದ್ದು ಅಂತಿಮ ಕ್ಷಣದಲ್ಲಿ ಕುತೂಹಲ ಕೆರಳಿಸಿದೆ. ಕಳೆದ 15ರಂದು ತಾಂತ್ರಿಕ ಅಡಚಣೆಯಿಂದ ಉಡಾವಣೆಗೆ 1 ಗಂಟೆ ಮೊದಲು ರದ್ದಾಗಿತ್ತು.

ಚಂದ್ರಯಾನ-2 ನ ಕಾರ್ಯಕ್ಷಮತೆ ಸಹಜವಾಗಿದ್ದು ಎಲ್ಲವೂ ಅಂದುಕೊಂಡಂತೆ ಇಂದು ಉಡಾವಣೆಯಾಗಲಿದೆ ಎಂದು ಇಸ್ರೊ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ. ಭಾರತದ ಎರಡನೇ ಚಂದ್ರ ಪರಿಶೋಧನೆ ಯೋಜನೆಯಾಗಿರುವ ಚಂದ್ರಯಾನ-2 ಯಶಸ್ವಿಯಾಗಲಿದ್ದು ಇದರಿಂದ ಚಂದ್ರನ ಮೇಲ್ಮೈ ಮೇಲಿನ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದಾಗಿದೆ.

ಉಡಾವಣೆಗೆ ಸರಿಯಾದ ಕ್ರಮ ವಹಿಸಲಾಗಿದೆ. ಕಳೆದ 15ರಂದು ಉಡಾವಣೆ ರದ್ದುಗೊಂಡ ನಂತರ ಅದರಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸಲು ನಮಗೆ ಒಂದು ದಿನಕ್ಕಿಂತ ಜಾಸ್ತಿ ಸಮಯ ಹಿಡಿಯಿತು, ಇಂದು ಅಂತಹ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾಗಲಿಕ್ಕಿಲ್ಲ ಎಂದರು ಶಿವನ್.

47 ದಿನಗಳ 3.84 ಲಕ್ಷ ಕಿಲೋ ಮೀಟರ್ ವರೆಗಿನ ಪ್ರಯಾಣ ಚಂದ್ರಯಾನ-2ರದ್ದಾಗಿದೆ. 2008ರಲ್ಲಿ ಉಡಾವಣೆಯಾಗಿದ್ದ ಚಂದ್ರಯಾನ-1 ಚಂದ್ರನ ಮೇಲೆ ನೀರಿನ ಅಂಶ ಇರುವುದನ್ನು ಪತ್ತೆಹಚ್ಚಿತ್ತು. ಈ ಯೋಜನೆ ಯಶಸ್ವಿಯಾದರೆ, ಚಂದ್ರನ ಮೇಲೆ ಉಪಗ್ರಹವನ್ನು ಇಳಿಸಿದ ದೇಶಗಳಾದ ಅಮೆರಿಕಾ, ರಷ್ಯಾ, ಚೀನಾ ದೇಶಗಳ ಸಾಲಿಗೆ ಭಾರತ ನಿಲ್ಲಲಿದ್ದು ಪ್ರಪಂಚದಲ್ಲಿ ನಾಲ್ಕನೆಯ ದೇಶ ಎನಿಸಿಕೊಳ್ಳಲಿದೆ.

Comments are closed.