ರಾಷ್ಟ್ರೀಯ

ಅತೃಪ್ತರ ಶಾಸಕರ ಅರ್ಜಿ ವಿಚಾರಣೆ: ಸುಪ್ರೀಂ ಕೋರ್ಟ್ ನಲ್ಲಿ ಮೂರೂವರೆ ಗಂಟೆಗಳ ವಿಚಾರಣೆಯಲ್ಲಿ ನಡೆದಿದ್ದೇನು?

Pinterest LinkedIn Tumblr


ನವದೆಹಲಿ: ಶಾಸಕರ ರಾಜೀನಾಮೆ ಅಂಗೀಕರಿಸುವಲ್ಲಿ ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಅತೃಪ್ತರ ಶಾಸಕರು ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ನಡೆದಿದೆ. ಎರಡು ಕಡೆಯ ವಕೀಲರ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ತೀರ್ಪು ನಾಳೆ ನೀಡುವುದಾಗಿ ತಿಳಿಸಿದೆ. ಅತೃಪ್ತ ಶಾಸಕರ ಪರವಾಗಿ ಮುಕುಲ್ ರೋಹಟಗಿ ವಾದ ಮಂಡಿಸಿದರೆ, ಸ್ಪೀಕರ್ ಪರ ಅಭಿಷೇಕ್​ ಮನು ಸಿಂಘ್ವಿ ಹಾಗೂ ಸಿಎಂ ಪರವಾಗಿ ರಾಜೀವ್ ಧವನ್​ ಪ್ರತಿವಾದ ಮಂಡಿಸಿದರು.

ಮುಖ್ಯನ್ಯಾಯಮೂರ್ತಿ ರಂಜನ್​ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ರಾಜ್ಯ ಮೈತ್ರಿ ಸರ್ಕಾರದ ಅಳಿವು-ಉಳಿವು ನಿಂತಿದೆ. ಹೀಗಾಗಿ ಈ ಪ್ರಕರಣ ರಾಜ್ಯದಲ್ಲಿ ಅಷ್ಟೇ ಅಲ್ಲದೇ ಇಡೀ ದೇಶದ ಗಮನವನ್ನು ಸೆಳೆದಿದೆ. ವಿಚಾರಣೆ ವೇಳೆ ವಕೀಲರು ಪೀಠದ ಮುಂದೆ ಮಂಡಿಸಿ, ವಾದ-ಪ್ರತಿವಾದಗಳು, ನ್ಯಾಯಮೂರ್ತಿಗಳ ಯಾವೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಇಂದು ಬೆಳಗ್ಗೆ ವಿಚಾರಣೆ ಆರಂಭವಾದಾಗ ಅತೃಪ್ತರ ಪರ ಮುಕುಲ್ ರೋಹಟಗಿ ವಾದ ಮಂಡನೆ ಆರಂಭಿಸಿದರು. ಒಂದೇ ಸಲ ನೀಡಿದ್ದ ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರ ಆಗಿದೆ. ಉಳಿದವರ ರಾಜೀನಾಮೆ ಅಂಗೀಕಾರ ಆಗಿಲ್ಲ. ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರವಾಗಬೇಕಾದರೆ ಉಳಿದವರ ರಾಜೀನಾಮೆ ಏಕೆ ಅಂಗೀಕಾರವಾಗುತ್ತಿಲ್ಲ? ಸ್ಪೀಕರ್ ಅನವಶ್ಯಕವಾಗಿ ತಡ ಮಾಡುತ್ತಿದ್ದಾರೆ. ಅವರಿಗೆ ಬೇರೆ ಉದ್ದೇಶ ಇದ್ದಂತಿದೆ. ಸ್ಪೀಕರ್ ದ್ವಂದ್ವ ‌ನೀತಿ ಅನುಸರಿಸುತ್ತಿದ್ದಾರೆ. ಶಾಸಕರು ಬೇರೆ ಪಕ್ಷಕ್ಕೆ ಸೇರುವುದು ಮತ್ತು ಜನರ ಬಳಿಗೆ ಹೋಗುವುದು ಅವರಿಗೆ ಬಿಟ್ಟಿದ್ದು. ಸ್ಪೀಕರ್ ಒತ್ತಾಯ ಪೂರ್ವಕವಾಗಿ ಇಷ್ಟವಿಲ್ಲದ ಪಕ್ಷದಲ್ಲಿ‌ಇರುವಂತೆ ಮಾಡಿದ್ದಾರೆ. ಗುರುವಾರ ವಿಶ್ವಾಸ ಮತ ಯಾಚನೆ ಇದೆ. ಈ ಹಿನ್ನೆಲೆಯಲ್ಲಿ ಹೊಸ ವಿಪ್ ಮಾಡಿದ್ದಾರೆ. ಈಗ ಅತೃಪ್ತ ಶಾಸಕರು ಸದನಕ್ಕೆ ಹಾಜರಾಗದಿದ್ದರೆ ವಿಪ್ ಉಲ್ಲಂಘನೆ ಆಗಲಿದೆ. ವಿಪ್ ಉಲ್ಲಂಘನೆ ಆದ ಮೇಲೆ ಅನರ್ಹತೆ ಮಾಡುತ್ತಾರೆ. ಆರ್ಟಿಕಲ್ 191(2)ರ ಪ್ರಕಾರ ರಾಜೀನಾಮೆ ನೀಡುವುದು ಕೂಡ ಶಾಸಕರ ಹಕ್ಕು. ಶಾಸಕರ ರಾಜೀನಾಮೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ನಿಯಮಾವಳಿಗೆ ಅನುಸಾರವಾಗಿಯೇ ರಾಜೀನಾಮೆ ನೀಡಲಾಗಿದೆ. ಸ್ಪೀಕರ್ ರಾಜೀನಾಮೆ ಅಂಗೀಕರಿಸಲೇಬೇಕು. ಗುರುವಾರ ಸರ್ಕಾರ ಹೋಗುವುದು ನಿಶ್ಚಿತ. ರಾಜೀನಾಮೆ ಅಂಗೀಕರಿಸದೆ ಅಧಿವೇಶನಕ್ಕೆ ಶಾಸಕರು ಹಾಜರಾಗುವಂತೆ ಮಾಡುವುದು ಸರಿಯೇ ಎಂದು ರೋಹಟಗಿ ಪ್ರಶ್ನೆ ಮಾಡಿ, ವಾದ ಮಂಡಿಸಿದರು.

ಶಾಸಕರು ರಾಜೀನಾಮೆ ನೀಡಿದ ಬಳಿಕ ಅನರ್ಹಗೊಳಿಸುವಂತೆ ದೂರು ನೀಡಿದ್ದು ಏಕೆ?
ಶಾಸಕರನ್ನು ಅನರ್ಹಗೊಳಿಸುವಂತೆ ಕೇಳುತ್ತಿರುವುದು ಏಕೆ ಎಂದು ನ್ಯಾ.ರಂಜನ್ ಗೋಗೊಯ್ ವಕೀಲರಿಗೆ ಪ್ರಶ್ನೆ ಮಾಡಿದರು. ಆಗ ರೋಹಟಗಿ ಅವರು, ಶಾಸಕರು ಪಕ್ಷದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು. ಅದಕ್ಕೆ ಸಿಜೆಐ, ಎಲ್ಲಾ ಶಾಸಕರ ಅನರ್ಹತೆಗೆ ಒಂದೇ ಕಾರಣವಾ ಎಂದು ಮರು ಪ್ರಶ್ನೆ ಮಾಡಿದರು. ಹೆಚ್ಚು ಕಡಿಮೆ ಒಂದೇ ಕಾರಣ ಎಂದ ರೋಹಟಗಿ, ಸ್ಪೀಕರ್ ಹೇಳುವಂತೆ ವಿಚಾರಣೆ ನಡೆಸುವ ಅಗತ್ಯ ಇಲ್ಲ ಎಂದರು.

ಸ್ಪೀಕರ್ ವಿಚಾರಣೆ ನಡುವೆ ನ್ಯಾಯಾಧೀಶರ ಹಸ್ತಕ್ಷೇಪದ ಬಗ್ಗೆ ಚರ್ಚೆ ಬಂದಾಗ, ಹೀಗೆ ಮಾಡಿ ಎಂದು ಸ್ಪೀಕರ್​ಗೆ ಹೇಳೋಕಾಗೊಲ್ಲ ಎಂದು ನ್ಯಾ.ಗೋಗೊಯ್ ಹೇಳಿದರು. ಆಗ ರೋಹಟಗಿ, ಆದೇಶ ಅಲ್ಲ. ಕೇವಲ ಸೂಚನೆ (Conversation) ಎಂದಾಗ, ರಾಜೀನಾಮೆ ಅಂಗೀಕರಿಸಲು ಸ್ಪೀಕರ್​ಗೆ ಸಾಂವಿಧಾನಿಕ ತಡೆಗಳಿವೆಯೇ ಎಂದು ನ್ಯಾಯಮೂರ್ತಿ ಪ್ರಶ್ನೆ ಮಾಡಿದರು. ಅದಕ್ಕೆ ರೋಹಟಗಿ ಅವರು, ಸ್ವ ಇಚ್ಛೆ ಮತ್ತು ಸತ್ಯ ಎರಡೇ ರಾಜೀನಾಮೆ ಅಂಗೀಕಾರಕ್ಕೆ ಪ್ರಮುಖ ಮಾನದಂಡ ಎಂದು ವಿವರಣೆ ನೀಡಿ, ಗೋವಾ, ಮಧ್ಯಪ್ರದೇಶ, ಕೇರಳದ ಪ್ರಕರಣಗಳನ್ನು ಉಲ್ಲೇಖಿಸಿದರು.

ರಾಜೀನಾಮೆಗೂ ಮುನ್ನ ಅನರ್ಹತೆ ಅರ್ಜಿ ಪರಿಗಣಿಸುವ ನಿಯಮವಿದೆಯಾ ಎಂದು ಸಿಜೆಐ ಪ್ರಶ್ನೆ ಮಾಡಿದಾಗ, ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿಲ್ಲ ಎಂಬುದಕ್ಕೆ ಸ್ಪೀಕರ್ ಬಳಿ ಸಾಕ್ಷ್ಯಗಳಿದ್ದರೆ ರಾಜೀನಾಮೆ ತಡೆ ಹಿಡಿಯಬಹುದು ಎಂದು ಹಲವು ಹೈ ಕೊರ್ಟ್​ಗಳು ತೀರ್ಪು ನೀಡಿವೆ. ಆದರೆ ಇಲ್ಲಿ ಸ್ಪೀಕರ್ ಬಳಿ ಅಂತಹ ಯಾವ ಸಾಕ್ಷ್ಯಗಳು ಇಲ್ಲ. ಶಾಸಕರ ಗೌರವಯುತ ನಿರ್ಗಮನಕ್ಕೆ ಕೋರ್ಟ್ ಅವಕಾಶ ಮಾಡಿಕೊಡಲಿ ಎಂದು ಮನವಿ ಮಾಡಿದರು.

ಅದಕ್ಕೆ ನ್ಯಾಯಮೂರ್ತಿಗಳು, ಸುಪ್ರೀಂಕೋರ್ಟ್ ಸ್ಪೀಕರ್​ಗೆ ಹೇಳಲು ಅಥವಾ ನಿರ್ದೇಶನ ನೀಡುವುದಿಲ್ಲ. ನೀವು ಯಾವ ರೀತಿಯ ಆದೇಶದ ನಿರೀಕ್ಷೆಯಲ್ಲಿದ್ದೀರಿ? ಎಂದು ರೋಹಟಗಿ ಅವರನ್ನು ಪ್ರಶ್ನೆ ಮಾಡಿದರು. ಅದಕ್ಕೆ ಅವರು, ಮೊದಲ ದಿನದ ವಿಚಾರಣೆಯಲ್ಲಿ ಇಂದೇ ನಿರ್ಧಾರ ಮಾಡಿ ಎಂದು ನ್ಯಾಯಾಲಯ ನೀಡಿದ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಮೈತ್ರಿ ಸರ್ಕಾರ ರಚನೆ ಆಗುವಾಗ ಸುಪ್ರೀಂಕೋರ್ಟ್ ರಾಜ್ಯಪಾಲರಿಗೂ ಸೂಚನೆ ನೀಡಿತ್ತು. ಅದೇ ರೀತಿ ಸ್ಪೀಕರ್​ಗೂ ನಿರ್ದೇಶನ ನೀಡಿ. ಈ ಹಿಂದೆ ಯಡಿಯೂರಪ್ಪ ಸರ್ಕಾರ ರಚನೆ ಮಾಡಿದಾಗ ಸುಪ್ರೀಂಕೋರ್ಟ್​ನ ನ್ಯಾ.ಸಿಕ್ರಿ ಅವರು, 24 ಗಂಟೆಯೊಳಗೆ ವಿಶ್ವಾಸಮತ ಸಾಬೀತಿಗೆ ಸೂಚಿಸಿದ್ದರು. ಹಾಗಾಗಿ ‌ಸ್ಪೀಕರ್ ಗೆ ನಿರ್ದೇಶಿಸಲು ಸುಪ್ರೀಂಗೆ ಆಧಿಕಾರವಿದೆ ಎಂದು ಹೇಳಿ ಮುಕುಲ್ ರೋಹಟಗಿ ತಮ್ಮ ವಾದ ಮಂಡನೆ ಮುಕ್ತಾಯಗೊಳಿಸಿದರು.

ಸಿಂಘ್ವಿ ಪ್ರತಿವಾದ ಏನು?

ಮುಕುಲ್ ರೋಹಟಗಿ ನಂತರ ಸ್ಪೀಕರ್ ಪರ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಆರಂಭಿಸಿದರು. ಸ್ಪೀಕರ್ ರಾಜೀನಾಮೆ ಅಂಗೀಕಾರ ಪ್ರಕ್ರಿಯೆ ಆರಂಭಿಸಿದ್ದಾರೆ. ಕೆಲವರನ್ನು ವಿಚಾರಣೆಗೆ ಕರೆದಿದ್ದರು. ರಾಜೀನಾಮೆ ಅಂಗೀಕಾರ ಮತ್ತು ಅನರ್ಹತೆ ಎರಡೂ ಬೇರೆ ಬೇರೆ. ರಾಜೀನಾಮೆಗೂ ಮುನ್ನವೇ ಅನರ್ಹತೆಗೆ ದೂರು ಬಂದಿದೆ. ಮುಕುಲ್ ರೋಹಟಗಿ ವಾದದಲ್ಲಿ ಹುರುಳಿಲ್ಲ. ರಾಜೀನಾಮೆ‌ ಸಲ್ಲಿಸಲು ಸಕಾರಣಗಳಿಲ್ಲ. ತ್ವರಿತವಾಗಿ ರಾಜೀನಾಮೆ ಅಂಗೀಕರಿಸುವುದು ಸರಿಯಾದ ಕ್ರಮವಲ್ಲ ಎಂದು ವಾದಿಸಿದರು.

ವಿಶ್ವಾಸ ಮತಯಾಚನೆ ಇರುವ ಹಿನ್ನೆಲೆಯಲ್ಲಿ ರಾಜೀನಾಮೆ ಅಂಗೀಕಾರ ಕೇಳುತ್ತಿದ್ದಾರೆ. ಅನರ್ಹತೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಹಿಂದೆ ಸಾಂವಿಧಾನಿಕ ಪೀಠ ಇದನ್ನೇ ಹೇಳಿದೆ. ಶಾಸಕರು ಖುದ್ದಾಗಿ ಬಂದು ರಾಜೀನಾಮೆ ನೀಡಬೇಕೆಂಬ ನಿಯಮ ಇದೆ. ಸಾಂವಿಧಾನಿಕ ಪೀಠ ಕೂಡ ಇದನ್ನು ಎತ್ತಿಹಿಡಿದಿದೆ. ಜೊತೆಗೆ ಕ್ರಮಬದ್ಧವಾಗಿರಬೇಕೆಂದು ಹೇಳಲಾಗಿದೆ. ರಾಜೀನಾಮೆ ಅಂಗೀಕಾರ ಒಂದೇ ರಾತ್ರಿಯಲ್ಲಿ ಮಾಡಿ ಮುಗಿಸುವ ಕೆಲಸವಲ್ಲ ಎಂದು ಹೇಳಿದರು.

ಆಗ ಸಿಜೆಐ ಅವರು, ಶಾಸಕರು ರಾಜೀನಾಮೆ ನೀಡಿದರೆ ಏಕೆ ಅಂಗೀಕರಿಸುತ್ತಿಲ್ಲ ಎಂದು ಸಿಂಘ್ವಿ ಅವರಿಗೆ ಪ್ರಶ್ನೆ ಮಾಡಿದರು. ಕಲಂ 190ರಂತೆ ಶಾಸಕರ ವಿಚಾರಣೆ ನಡೆಸದೆ ಅಂಗೀಕಾರ ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ, ಅನರ್ಹತೆ ಪ್ರಕರಣವನ್ನು ಪ್ರತ್ಯೇಕವಾಗಿ ನೋಡಿ. ಆದರೆ ರಾಜೀನಾಮೆಗಳು ಕ್ರಮಬದ್ದವಾಗಿರಬೇಕು ಅಲ್ಲವೇ? ಅವುಗಳ ಕ್ರಮಬದ್ದತೆ ಬಗ್ಗೆ ಪರಿಶೀಲಿಸಬೇಕಲ್ಲವೇ?. ಈಗಲ್ಲದಿದ್ದರೂ ಮುಂದಾದರೂ ಆ ಶಾಸಕರು ಅನರ್ಹವಾಗುತ್ತಾರೆ. ರಾಜೀನಾಮೆ ನೀಡುವುದರಲ್ಲಿ ಎರಡು ರೀತಿ ಇರುತ್ತದೆ. ಒಂದು- ನಿಜಕ್ಕೂ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುವುದು. ಇನ್ನೊಂದು ಆರಿಸಿ ಬಂದ ಪಕ್ಷಕ್ಕೆ ದ್ರೋಹ ಬಗೆಯಲು ರಾಜೀನಾಮೆ ನೀಡುವುದು. ಇಂಥ ಪ್ರಕರಣದಲ್ಲಿ ಸ್ಪೀಕರ್ ಹೇಗೆ ಕಾರ್ಯ ನಿರ್ವಹಿಸಬೇಕು. 10ನೇ ಷೆಡ್ಯೂಲ್ ನಲ್ಲಿ ಇದರ ಉಲ್ಲೇಖವಿದೆ. ಹೀಗಾಗಿ ಸ್ಪೀಕರ್ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ. ರಾಜೀನಾಮೆ ಅಂಗೀಕಾರ ಮತ್ತು ಅನರ್ಹತೆ ರಾಜಕಾರಣಗೊಳ್ಳಬಾರದು. ರಾಜೀನಾಮೆ ಅನರ್ಹತೆಯಿಂದ ಪಾರಾಗುವ ಮಾರ್ಗ ಆಗಬಾರದು ಎಂದು ವಾದಿಸಿದರು.

ಜುಲೈ 11 ರಿಂದ ಈವರೆಗೆ ಏನು ಮಾಡುತ್ತಿದ್ದೀರಿ? ಎಂದು ಸಿಜೆಐ ಪ್ರಶ್ನೆ ಮಾಡಿದಾಗ, ಶಾಸಕರು ಸ್ಪೀಕರ್​ಗೆ ಹೇಳದೆ ಬಂದು ರಾಜೀನಾಮೆ ನೀಡಿದ್ದಾರೆ. ಶಾಸಕರಿಂದ ಹಲವು ಲೋಪಗಳಾಗಿವೆ. ಸ್ಪೀಕರ್ ಹೇಗೆ ತ್ವರಿತವಾಗಿ ನಿರ್ಧರಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಆಗ ಮಧ್ಯಪ್ರವೇಶಿಸಿದ ಸಿಜೆಐ, ನಾವು ಅನರ್ಹಗೊಳಿಸುವ ಸ್ಪೀಕರ್ ಅಧಿಕಾರ ಪ್ರಶ್ನಿಸುತ್ತಿಲ್ಲ. ರಾಜೀನಾಮೆ ಅಂಗೀಕಾರ ತಡ ಏಕಾಗುತ್ತಿದೆ ಎಂದು ಕೇಳುತ್ತಿದ್ದೇವೆ. ರಾಜೀನಾಮೆ ಅಂಗೀಕರಿಸದಂತೆ ಸ್ಪೀಕರ್ ಅವರನ್ನು ತಡೆಯುತ್ತಿರುವುದೇನು? ಸರ್ಕಾರ ತಡೆಯುತ್ತಿದೆಯಾ ಎಂದು ಸಿಂಘ್ವಿ ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು, ಖಂಡಿತವಾಗಿಯೂ ಇಲ್ಲ. ಯಥಾಸ್ಥಿತಿ ಆದೇಶ ತೆರವುಗೊಳಿಸಿ. ನಾಳೆ ಅಥವಾ ನಾಳಿದ್ದು ರಾಜೀನಾಮೆ ಮತ್ತು ಅನರ್ಹತೆ ಪ್ರಕರಣ ಇತ್ಯರ್ಥಗೊಳಿಸುತ್ತೇವೆ. ಒಂದು ಸಾಂವಿಧಾನಿಕ ಸಂಸ್ಥೆಗೆ ಮತ್ತೊಂದು ಸಂಸ್ಥೆ ನಿರ್ದೇಶನ ನೀಡಬಾರದು. ಅದರಲ್ಲೂ ಮುಖ್ಯವಾಗಿ ಸ್ಪೀಕರ್ ಹುದ್ದೆಗೆ. ಸ್ಪೀಕರ್ ಕಚೇರಿ ಕೂಡ ನ್ಯಾಯಾಂಗವನ್ನು ಗೌರವಿಸಲಿದೆ. ಒಂದೊಮ್ಮೆ ಸ್ಪೀಕರ್ ತಪ್ಪು ನಿರ್ಧಾರ ಮಾಡಿದರೆ ಆಗ ನೀವು ಮಧ್ಯಸ್ಥಿಕೆ ವಹಿಸಬಹುದು. ಸ್ಪೀಕರ್ ಬಹಳ ಅನುಭವಿ ಇದ್ದಾರೆ, ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಊಟದ ವಿರಾಮದ ನಂತರ ಮಧ್ಯಾಹ್ನ ವಿಚಾರಣೆ ಆರಂಭವಾದಾಗ, ನ್ಯಾ.ರಂಜನ್ ಗೋಗೊಯ್ ಅವರು ಮುಕುಲ್ ರೋಹಟಗಿ ಒಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ನೀವು (ಸಿಂಘ್ವಿ) ಒಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದೀರಿ. ಒಟ್ಟಿನಲ್ಲಿ ಇದು ಒಂದು ತರ ಪೊಲಿಟಿಕಲ್ ಗೇಮ್ ಎನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಮತ್ತೆ ವಾದ ಮಂಡನೆ ಆರಂಭಿಸಿದ ಸಿಂಘ್ವಿ, 2018ರಲ್ಲಿ ರಾಜ್ಯಪಾಲರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದಾಗ ವಿಧಾನಸಭೆ ಮತ್ತು ಸ್ಪೀಕರ್ ಇರಲಿಲ್ಲ. ಅವರು ಇರುವಾಗ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ಸರ್ಕಾರ ಇರುವಾಗ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂಕೋರ್ಟ್​ಗೆ ಇಲ್ಲ ಎಂದು ಹೇಳಿ, ತಮ್ಮ ವಾದ ಮುಕ್ತಾಯಗೊಳಿಸಿದರು.

ಸಿಎಂ ಪರ ರಾಜೀವ್ ಧವನ್ ವಾದ

ಆನಂತರ ಸಿಎಂ ಪರವಾಗಿ ವಕೀಲ ರಾಜೀವ್ ಧವನ್ ವಾದ ಮಂಡನೆ ಆರಂಭಿಸಿದರು. ಆರ್ಟಿಕಲ್ 32ರ ಪ್ರಕಾರ ಸ್ಪೀಕರ್ ಕೆಲಸದಲ್ಲಿ ಸುಪ್ರೀಂಕೋರ್ಟ್​ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಾಲಯಕ್ಕೆ ನೇರವಾಗಿ ಹೇಳಿದರು. ನಂತರ, ಇದು ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಮಾತ್ರ ಅಲ್ಲ. ಸಿಎಂ ಮತ್ತು ಸಿಎಂ ಆಗಲು ಸಾಧ್ಯವೇ ಇಲ್ಲದವರ ನಡುವಿನ ವಿಚಾರ. ಆರ್ಟಿಕಲ್ 32ರಲ್ಲಿ ಒಂದೇ ಒಂದು ಅಕ್ಷರವೂ ಸುಪ್ರೀಂ ಕೋರ್ಟ್ ಪರವಾಗಿಲ್ಲ. ಸ್ಪಷ್ಟವಾಗಿ ಅದು ಸ್ಪೀಕರ್ ವಿವೇಚಾನಾಧಿಕಾರದ ಬಗ್ಗೆ ಹೇಳಿದೆ. ಶಾಸಕರು ರಾಜೀನಾಮೆ ನೀಡಿರುವುದು ಮಂತ್ರಿ ಆಗುವ ಉದ್ದೇಶದಿಂದ ಅಷ್ಟೇ. ಈ ವೇಳೆ ಸ್ಪೀಕರ್ ಕಣ್ಣುಮುಚ್ಚಿಕೊಂಡು ಇರಲು ಸಾಧ್ಯವಿಲ್ಲ. ಶಾಸಕರು ಆಮಿಷಗಳನ್ನು ಬೆನ್ನತ್ತಿ ಹೋಗುತ್ತಿದ್ದಾರೆ. ಇವು ವೈಯಕ್ತಿಕ ಹಿತಾಸಕ್ತಿಗಾಗಿ ನೀಡಿದ ರಾಜೀನಾಮೆಗಳು. ಶಾಸಕರು ಭ್ರಷ್ಟಾಚಾರ ಮತ್ತು ದುರಾಡಳಿತದ ಆರೋಪ ಮಾಡಿದ್ದಾರೆ. ರಾಜೀನಾಮೆ ನೀಡಿದ್ದು ಮೊದಲೋ, ಅನರ್ಹತೆಯ ದೂರು ದಾಖಲಾಗಿದ್ದು ಮೊದಲೊ. ಇದೊಂಥರಾ ಕೋಳಿ ಮೊದಲೋ, ಮೊಟ್ಟೆ ಮೊದಲೋ ಎನ್ನುವಂತಾಗಿದೆ. ಇದು ಸ್ಪೀಕರ್ V/s ಸುಪ್ರೀಂ ಕೋರ್ಟ್ ಅಲ್ಲ. ಸಿಎಂ ಮತ್ತು ಸಿಎಂ ಆಗಲು ಪ್ರಯತ್ನಿಸುತ್ತಿರುವವರ ಪ್ರಕರಣ. ಸುಪ್ರೀಂ ಕೋರ್ಟ್ ಈ ಅರ್ಜಿಯನ್ನು ಮಾನ್ಯ ಮಾಡಬಾರದು ಎಂದು ಧವನ್ ವಾದಿಸಿದರು.

ಸ್ಪೀಕರ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ, ನನಗೆ ಮನವರಿಕೆಯಾದರೆ ರಾಜೀನಾಮೆ ಅಂಗೀಕರಿಸುವೆ ಎಂದು. ಮನವರಿಕೆ ಎಂದರೆ ವೈಯಕ್ತಿಕವಾಗಿ ಅಲ್ಲ. ಸಾಂವಿಧಾನಿಕವಾಗಿ ಮನವರಿಕೆಯಾದರೆ ಎಂದು ಅರ್ಥ. ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದೆ. ವಿಶ್ವಾಸಮತ ಯಾಚನೆ ಬಗ್ಗೆ ಚರ್ಚೆಯಾಗಬೇಕಾಗಿದೆ. ವಿತ್ತೀಯ ವಿಧೇಯಕ ಪಾಸ್ ಆಗಬೇಕಿದೆ. ಪರಿಸ್ಥಿತಿಯನ್ನು ಶಾಸಕರು ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಶಾಸಕರಿಗೆ ಆಯ್ಕೆಗಳಿಲ್ಲ. ಅವರು 10ನೇ ಪರಿಚ್ಚೇದದ ವ್ಯಾಪ್ತಿಗೆ ಬರುವುದಿಲ್ಲ. ಸ್ಪೀಕರ್ ಅವರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಧವನ್​ ಹೇಳಿ ತಮ್ಮ ವಾದ ಮುಕ್ತಾಯಗೊಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ಪರ ವಕೀಲರು, ಪ್ರಜಾಪ್ರಭುತ್ವ ಉಳಿಯಬೇಕಿದೆ. ಶಾಸಕರು ಸ್ವ ಹಿತಾಸಕ್ತಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ವಾದಿಸಿದರು.

ಅತೃಪ್ತ ಶಾಸಕರ ಪರಮತ್ತೆ ವಾದ ಆರಂಭಿಸಿದ ಮುಕುಲ್ ರೋಹಟಗಿ, ರಾಜೀನಾಮೆ ಕೊಟ್ಟವರ ಮನಸ್ಸು‌ ಮತ್ತು ಹೃದಯ ಪರಿಶೀಲಿಸುವುದು ಯಾರೊಬ್ಬರ ಕೆಲಸವಲ್ಲ. ಶಾಸಕರನ್ನು ಸರ್ಕಾರದ ಪರವಾಗಿ ಮತ ಚಲಾಯಿಸುವ ಒತ್ತಡ ಸೃಷ್ಟಿಸಲಾಗುತ್ತಿದೆ. ಇಷ್ಟವಿಲ್ಲದ ಪಕ್ಷದ ಜೊತೆಗೆ ಗುರುತಿಸಿಕೊಳ್ಳಲು ಒತ್ತಾಯಿಸಲಾಗುತ್ತಿದೆ. ಮನಸ್ಸಿಲ್ಲದೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಒತ್ತಡ ಹೇರಲಾಗುತ್ತಿದೆ ಎಂದು ವಾದಿಸಿದರು.

2ಸುಧೀರ್ಘ 3.45 ಗಂಟೆ ವಾದ-ಪ್ರತಿವಾದಗಳನ್ನು ಆಲಿಸಿದ ತ್ರಿಸದಸ್ಯ ಪೀಠ ನಾಳೆ ಬೆಳಗ್ಗೆ 10.30ಕ್ಕೆ ತೀರ್ಪು ನೀಡುವುದಾಗಿ ಪ್ರಕಟಿಸಿತು.

Comments are closed.