ರಾಷ್ಟ್ರೀಯ

ಸುಪ್ರೀಂಕೋರ್ಟ್‌ನಲ್ಲಿ ಬಂಡಾಯ ಶಾಸಕರ ವಾದ ಪ್ರತಿವಾದ !

Pinterest LinkedIn Tumblr

ನವದೆಹಲಿ: ತಮ್ಮ ರಾಜೀನಾಮೆಯನ್ನು ಸ್ವೀಕರಿಸುವಂತೆ ಸ್ಪೀಕರ್‌ ಅವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಅತೃಪ್ತ 15 ಶಾಸಕರು ಸಲ್ಲಿಸಿರುವ ಅರ್ಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಸುಮಾರು ಎರಡು ಗಂಟೆಗಳ ಕಾಲ ಬಿರುಸಿನ ವಾದ-ವಿವಾದ ನಡೆದು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

ಅತೃಪ್ತ ಶಾಸಕರ ಪರ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸಿದರು.

ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾ.ದೀಪಕ್ ಗುಪ್ತಾ, ಅನಿರುದ್ಧ ಬೋಸ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯುತ್ತಿದೆ.

ಶಾಸಕರು ತಮ್ಮ ಕೈ ಬರಹದಲ್ಲಿ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಉಮೇಶ್ ಜಾಧವ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆ ಅಂಗೀಕಾರಕೊಂಡಿತ್ತು. ಆದರೆ ಈಗ ಸ್ಪೀಕರ್ ರಾಜೀನಾಮೆ ಅಂಗೀಕಾರಕ್ಕೆ ತಡ ಮಾಡುತ್ತಿರುವುದು ಸರಿಯಲ್ಲ ಎಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ತಿಳಿಸಿದರು.

10 ಶಾಸಕರು ಜುಲೈ 10ರಂದೇ ರಾಜೀನಾಮೆ ನೀಡಿದ್ದಾರೆ. ಸಂವಿಧಾನದ ವಿಧಿ 190 ಮತ್ತು ಶೆಡ್ಯೂಲ್ 10ರ ನಡುವೆ ವ್ಯತ್ಯಾಸ ಇದ್ದು, ಸ್ಪೀಕರ್ ನಿರ್ಧಾರವನ್ನು ಕೋರ್ಟ್ ಪ್ರಶ್ನಿಸಬಹುದು. ಅನರ್ಹತೆ ಬಾಕಿ ಇರುವಾಗ ರಾಜೀನಾಮೆ ಸ್ವೀಕಾರಕ್ಕೆ ಅಡ್ಡಿಯಾಗಬಾರದು. ಉಮೇಶ್ ಜಾಧವ್ ಮೇಲೆ ಅನರ್ಹತೆ ದೂರು ಇದ್ದರೂ ರಾಜೀನಾಮೆ ಅಂಗೀಕರಿಸಲಾಗಿತ್ತು. ಅದೇ ರೀತಿ ರಾಜೀನಾಮೆ ನೀಡಿರುವ ಎಲ್ಲ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕು. ಈ ವಿಚಾರದಲ್ಲಿ ಸ್ಪೀಕರ್ ದ್ವಂದ್ವ ನೀತಿಯನ್ನು ಹೊಂದಿದ್ದಾರೆ. ಶಾಸಕರು ಅನರ್ಹ ಮಾಡುವಂತಹ ತಪ್ಪು ಏನು ಮಾಡಿದ್ದಾರೆ ? ಎಂದು ಪ್ರಶ್ನಿಸಿದರು.

ನಾನು ಅನರ್ಹತೆ ಪ್ರಕರಣ ಕೈ ಬಿಡುವಂತೆ ಹೇಳಿಲ್ಲ. ಇಲ್ಲಿ ರಾಜೀನಾಮೆ ಸಲ್ಲಿಸಿದ ಬಳಿಕ ಅನರ್ಹತೆಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಆರ್ಟಿಕಲ್ 191/2 ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಈ ಹಕ್ಕನ್ನು ತಡೆಯಲು ಸ್ಪೀಕರ್ ಅವರಿಗೆ ಸಾಧ್ಯವಿಲ್ಲ. ಶಾಸಕರು ಇಷ್ಟಪಟ್ಟಲ್ಲಿ ನಿರ್ಧಾರ ತೆಗೆದುಕೊಳ್ಳಲು ಸರ್ವ ಸ್ವತಂತ್ರರು. ಎಲ್ಲ ಶಾಸಕರು ನಿಯಮಬದ್ಧವಾಗಿಯೇ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಈ ಕೂಡಲೇ ಸ್ಪೀಕರ್ ರಾಜೀನಾಮೆಯನ್ನು ಅಂಗೀಕರಿಸಬೇಕು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದರೆ ಅದನ್ನು ಸ್ಪೀಕರ್ ಪ್ರಶ್ನಿಸಬಾರದು. ಶಾಸಕರಾಗಿ ಮುಂದುವರಿಯಲು ಸ್ಪೀಕರ್ ಒತ್ತಾಯ ಮಾಡಬಾರದು. ಸಂವಿಧಾನದ 191/2 ರಾಜೀನಾಮೆ ನೀಡುವುದು ಶಾಸಕರ ಹಕ್ಕು. ಈ ಹಕ್ಕನ್ನು ತಡೆಯಲು ಯಾರಿಗೂ ಇಲ್ಲ. ವಿಪ್ ಜಾರಿಯಾಗುವ ಮೊದಲೇ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯ ನಿಯಮಗಳ ಪ್ರಕಾರ ಅವರ ರಾಜೀನಾಮೆ ಅಂಗೀಕಾರವಾಗಬೇಕು ಎಂದು ರೋಹ್ಟಗಿ ವಾದ ಮಂಡಿಸಿದರು.

ಸರ್ಕಾರಕ್ಕೆ ಬಹುಮತವಿಲ್ಲ. ಅನರ್ಹತೆಯ ಅಸ್ತ್ರ ಹೂಡಿ ಸರ್ಕಾರವನ್ನು ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಮೊದಲು ರಾಜೀನಾಮೆ ನೀಡಲಾಗಿದೆ. ಬಳಿಕ ಅನರ್ಹತೆಗೆ ಸಂಬಂಧಿಸಿದ ಅರ್ಜಿ ಸಲ್ಲಿಸಲಾಗಿದೆ ಎಂದರು.

ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ವಾದ ಮಂಡಿಸಿ, ರಾಜೀನಾಮೆ ಯಾವಾಗ ಕೊಟ್ಟಿದ್ದಾರೆ ಎಂಬುದು ಮುಖ್ಯವಲ್ಲ. ಸ್ಪೀಕರ್ ಅವರು ಅಂಗೀಕಾರ ಪ್ರಕ್ರಿಯೆ ಆರಂಭಿಸಿದ್ದಾರೆ. ಕೆಲವರಿಗೆ ತಮ್ಮ ಎದುರು ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದಾರೆ. ಶಾಸಕರ ಅನರ್ಹತೆ ಬಗ್ಗೆ ತೀರ್ಮಾನಿಸುವ ಹಕ್ಕು ಸ್ಪೀಕರ್ ಅವರಿಗಿದೆ. ರಾಜೀನಾಮೆಯ ಸತ್ಯಾಸತ್ಯತೆ ಬಗ್ಗೆ ಪರೀಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.

ವಾದ ವಿವಾದದ ಬಳಿಕ ನ್ಯಾಯಾಲಯದ ಕಲಾಪವನ್ನು ಭೋಜನ ವಿರಾಮದ ಬಳಿಕ ಕೈಗೆತ್ತಿಕೊಳ್ಳುವುದಾಗಿ ಹೇಳಿ ಪೀಠ ಮುಂದೂಡಿದೆ.

ತಮ್ಮ ರಾಜೀನಾಮೆಯನ್ನು ಸ್ಪೀಕರ್ ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಿ 15 ಮಂದಿ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅವರಲ್ಲಿ ಆನಂದ್ ಸಿಂಗ್, ಕೆ ಸುಧಾಕರ್, ಎನ್ ನಾಗರಾಜ್, ಮುನಿರತ್ನ ಮತ್ತು ರೋಶನ್ ಬೇಗ್ , ಪ್ರತಾಪ್ ಗೌಡ ಪಾಟೀಲ್, ರಮೇಶ್ ಜಾರಕಿಹೊಳಿ, ಭೈರತಿ ಬಸವರಾಜ್, ಬಿ ಸಿ ಪಾಟೀಲ್, ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಮಹೇಶ್ ಕುಮಟಳ್ಳಿ, ಕೆ ಗೋಪಾಲಯ್ಯ, ಎ ಎಚ್ ವಿಶ್ವನಾಥ್ ಮತ್ತು ನಾರಾಯಣ ಗೌಡ ಸೇರಿದ್ದಾರೆ.

Comments are closed.