ರಾಷ್ಟ್ರೀಯ

ಬಿಜೆಪಿ ಶಾಸಕನ ಪುತ್ರನ ವರ್ತನೆಗೆ ಆಕ್ರೋಶವ್ಯಕ್ತಪಡಿಸಿದ ಪ್ರಧಾನಿ ಮೋದಿ ಹೇಳಿದ್ದೇನು…?

Pinterest LinkedIn Tumblr

ನವದೆಹಲಿ: ಮಧ್ಯಪ್ರದೇಶದ ಬಿಜೆಪಿ ಶಾಸಕ, ಪಕ್ಷದ ಹಿರಿಯ ನಾಯಕ ಕೈಲಾಷ್ ವಿಜಯ ವರ್ಗೀಯ ಅವರ ಪುತ್ರ ಆಕಾಶ್ ವಿಜಯ ವರ್ಗೀಯ ಅವರ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಶಾಸಕರು, ಸಂಸದರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಸಂಸದೀಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದಾಗ ಪ್ರಧಾನಿ ಮೋದಿ ಪಕ್ಷದ ಸಂಸದರಿಗೆ ಈ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ. ಯಾವುದೇ ರಾಜಕೀಯ ನಾಯಕ ಕಾನೂನು ಕೈಗೆತ್ತಿಕೊಳ್ಳುವುದನ್ನು ಬೆಂಬಲಿಸುವವರ ವಿರುದ್ದ ಬಿಜೆಪಿ ನಾಯಕತ್ವ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಸಲಹೆ ನೀಡಿದರು.

ಘಟನೆ ಕುರಿತು ತೀವ್ರ ಆಕ್ರೋಶ ಗೊಂಡಂತೆ ಕಂಡು ಬಂದ ಪ್ರಧಾನಿ, ಘಟನೆಯ ಹಿಂದೆ ಯಾವ ನಾಯಕನ ಪುತ್ರ ಇದ್ದಾನೆ ಎಂಬುದನ್ನು ತಾವು ಕೇರ್ ಮಾಡುವುದಿಲ್ಲ, ಇಂತಹ ಘಟನೆಗಳು ನಡೆಯಬಾರದು ಹಾಗೂ ಇಂತಹ ಕೃತ್ಯಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ಯಾವ ನಾಯಕನ ಮಗನೇ ಆಗಿರಲಿ, ಇಂತಹ ಕೃತ್ಯ ನಡೆಸುವವರನ್ನು ಸಹಿಸಲು ಆಗುವುದಿಲ್ಲ ಎಂದು ಪ್ರಧಾನಿ ಮೋದಿ ಬಿಜೆಪಿ ಸಂಸದರಿಗೆ ಸೂಚಿಸಿದರೆಂದು ವರದಿಯಾಗಿದೆ.

ಮಧ್ಯ ಪ್ರದೇಶದ ಇಂದೋರ್ -3 ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಆಕಾಶ್ ವಿಜಯವರ್ಗೀಯ, ಮುನಿಸಿಪಲ್ ಅಧಿಕಾರಿ ಧೀರೇಂದ್ರ ಸಿಂಗ್ ಬೈಸ್ ಅವರ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದ ಕೃತ್ಯ ಟಿವಿ ಕ್ಯಾಮರಗಳಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳು ದೇಶಾದ್ಯಂತ ವೈರಲ್ ಆಗಿ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರದ ಸನ್ನಿವೇಶ ಸೃಷ್ಟಿಸಿತ್ತು.

ತಾನು ವಿಭಿನ್ನ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗೆ ಈ ಘಟನೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.ಜುಲೈ ಆರನೇ ತಾರೀಖಿನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ವಾರಣಾಸಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

Comments are closed.