
ನವ ದೆಹಲಿ (ಜುಲೈ.01); ಬ್ಯಾಂಕುಗಳಲ್ಲಿ ಗ್ರಾಹಕರು ಪಡೆದ ಸಾಲ ವಸೂಲಾತಿಗೆ ಗೂಂಡಾಗಳನ್ನು ಬಳಸುವ ಯಾವ ಅಧಿಕಾರವೂ ಬ್ಯಾಂಕುಗಳಿಗೆ ಇಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರದ ಸಂಸತ್ ಕಲಾಪದಲ್ಲಿ ಸ್ಪಷ್ಟನೆ ನೀಡಿದೆ.
ಸಂಸತ್ ಕಲಾಪದ ಪ್ರಶ್ನಾವಳಿ ಚರ್ಚೆ ವೇಳೆ ಬ್ಯಾಂಕುಗಳ ಸಾಲ ವಸೂಲಾತಿ ಕುರಿತು ಮಾತನಾಡಿದ ಸಾಂಸ್ಥಿಕ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್, “ಯಾವುದೇ ಬ್ಯಾಂಕಿನ ಗ್ರಾಹಕ ಆ ಬ್ಯಾಂಕಿನಿಂದ ಸಾಲ ಪಡೆದಿದ್ದರೆ, ಅವರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಲು ಗೂಂಡಾಗಳನ್ನು ನೇಮಿಸುವ ಅಧಿಕಾರ ಬ್ಯಾಂಕುಗಳಿಗೆ ಇಲ್ಲ.
ಸಾಲವನ್ನು ಕಾನೂನಾತ್ಮಕವಾಗಿ ಹೇಗೆ ವಸೂಲಿ ಮಾಡಬೇಕು ಎಂದು ರಿಸರ್ವ್ ಬ್ಯಾಂಕ್ ಕೆಲ ನೀತಿ ನಿರೂಪಣೆಗಳನ್ನು ರೂಪಿಸಿದೆ. ಎಲ್ಲಾ ಬ್ಯಾಂಕುಗಳು ಹಾಗೂ ಸಾಲ ವಸೂಲಾತಿ ಸಂಸ್ಥೆಗಳು ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಇದೇ ನೀತಿಗಳನ್ನು ಅನುಸರಿಸಬೇಕು” ಎಂದು ಬ್ಯಾಂಕುಗಳಿಗೆ ತಾಕೀತು ಮಾಡಿದ್ದಾರೆ.
ಸಾಲ ಪಡೆದವರಿಂದ ಹಣ ವಸೂಲಿ ಮಾಡಲು ಹಿಂಸಾತ್ಮಕ ದಾರಿ ಹಿಡಿಯಬಾರದು, ಮಾನಹಾನಿಯಾಗುವಂತೆ ಅವಮಾನಕಾರಿ ರೀತಿಯಲ್ಲಿ ನಡೆದುಕೊಳ್ಳಬಾರದು. ರಾತ್ರಿ ಅಥವಾ ಬೆಳಗ್ಗಿನ ಜಾವ ಮನೆಗೆ ಭೇಟಿ ನೀಡಬಾರದು. ರಿಸರ್ವ್ ಬ್ಯಾಂಕ್ ನೀತಿಗಳನ್ನು ಮೀರಿ ಯಾವುದೇ ಬ್ಯಾಂಕ್ ನಡೆದುಕೊಂಡರೆ ಅಥವಾ ಈ ಕುರಿತು ಸಾಲ ಪಡೆದವರು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೆ ಅಂತಹ ಬ್ಯಾಂಕು ಅಥವಾ ಸಾಲ ವಸೂಲಾತಿ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
Comments are closed.