
ನವದೆಹಲಿ (ಜೂ.28): ಜಮ್ಮು-ಕಾಶ್ಮೀರದಲ್ಲಿ ಇನ್ನೂ ಆರು ತಿಂಗಳ ಕಾಲ ರಾಷ್ಟ್ರಪತಿ ಆಡಳಿತ ಮುಂದುವರಿಸಲು ಮಂಡಿಸಲಾದ ವಿಧೇಯಕಕ್ಕೆ ಲೋಕಸಭೆ ಅನುಮೋದನೆ ನೀಡಿದೆ. ರಾಷ್ಟ್ರಪತಿಗಳೂ ಅಂಕಿತ ಹಾಕಿದ್ದಾರೆ. ಈ ವಿಧೇಯಕಕ್ಕೆ ಒಪ್ಪಿಗೆ ಸಿಗುವ ಮುನ್ನ ಸದನದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಜಮ್ಮು-ಕಾಶ್ಮೀರದ ಇವತ್ತಿನ ದುಸ್ಥಿತಿಗೆ ನೆಹರೂ ಅವರೇ ಕಾರಣ ಎಂದು ಅಮಿತ್ ಶಾ ಸದನದಲ್ಲಿ ಅಬ್ಬರಿಸಿದರು.
ಕಾಶ್ಮೀರ ಸಮಸ್ಯೆ ಕುರಿತು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಮಾತಿಗೆ ಪ್ರತಿಕ್ರಿಯಿಸಿದ ಅವರು, ಜಮ್ಮು ಕಾಶ್ಮೀರದ ಸಮಸ್ಯೆಗೆ ಕಾರಣ ನೆಹರೂ. ಸದಾ ತ್ಯಾಗದ ಬಗ್ಗೆ ಮಾತನಾಡುವ ಕಾಂಗ್ರೆಸ್ ಮೊದಲು ಈ ದೇಶವನ್ನು ವಿಭಜನೆ ಮಾಡಿದವರು ಯಾರು ಎಂದು ಹೇಳಲಿ ಪ್ರಶ್ನಿಸಿದರು.
ಕಾಶ್ಮೀರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತಂದು ಪ್ರಜಾತಂತ್ರ ವ್ಯವಸ್ಥೆಯನ್ನ ದಮನ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ನವರು ಆರೋಪ ಮಾಡುತ್ತಿದ್ದಾರೆ. ಆದರೆ, ರಾಜಕೀಯ ಲಾಭಾಕ್ಕಾಗಿ 356ನೇ ವಿಧಿಯನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ಸೇ ಹೊರತು ಬಿಜೆಪಿ ಅಲ್ಲ. ಈ ಬಗ್ಗೆ ನಮಗೆ ಪಾಠ ಮಾಡಲು ಬರಬೇಡಿ ಎಂದು ಲೋಕಸಭೆಯಲ್ಲಿ ಅಮಿತ್ ಶಾ ಗುಡುಗಿದರು.
ಈ 356ನೇ ವಿಧಿ ಹೇರಿಕೆಯಲ್ಲಿ ನಮ್ಮ ನೀತಿ ಅಚಲವಾಗಿದ್ದು, ಇದು ಶಾಶ್ವತವಲ್ಲ ಎಂದು ಸದನಕ್ಕೆ ತಿಳಿಸಿದರು.
ವಿಶೇಷ ಸಂದರ್ಭದ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ನಾವು ರಾಷ್ಟ್ರಪತಿ ಆಡಳಿತ ತರುತ್ತಿದ್ದೇವೆ. ಆದರೆ, ಇದಕ್ಕೂ ಮುನ್ನ ರಾಷ್ಟ್ರಪತಿ ಆಳ್ವಿಕೆಯ ಅಧಿಕಾರ ನೀಡುವ ಆರ್ಟಿಕಲ್ 356ನ್ನು 132 ಬಾರಿ ಬಳಸಲಾಗಿದೆ. ಅದರಲ್ಲಿ 93 ಬಾರಿ ಕಾಂಗ್ರೆಸ್ ಈ ಅಧಿಕಾರ ಉಪಯೋಗಿಸಿದೆ. ಈಗ ನಮಗೆ 356 ವಿಧಿಯನ್ನು ಯಾಕೆ ಉಪಯೋಗಿಸುತ್ತೀರಾ ಎಂದು ಪ್ರಶ್ನಿಸುತ್ತೀರಾ ಎಂದು ಶಾ ಗರಂ ಆದರು.
ಇದೇ ವೇಳೆ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯ ವಿಚಾರದಲ್ಲೂ ಅಮಿತ್ ಶಾ ನಿಷ್ಠುರ ಮಾತಿನಿಂದ ಗಮನ ಸೆಳೆದರು. ಕಾಶ್ಮೀರಕ್ಕೆ ಅನ್ವಯವಾಗುವ 370ನೇ ವಿಧಿ ಖಾಯಂ ಅಲ್ಲ, ಅದು ತಾತ್ಕಾಲಿಕ ಮಾತ್ರ ಎಂದು ಅಮಿತ್ ಶಾ ಹೇಳಿದರು.
ಅಮಿತಾ ಶಾ ಮಾತಿನ ಬಳಿಕವೂ ಕಾಂಗ್ರೆಸ್ ಈ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿತು. ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, ಬಿಜೆಪಿ ದೇಶವನ್ನು ಇಂದು ವಿಭಜನೆ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನ ಈ ಆರೋಪಕ್ಕೆ ಸಿಟ್ಟಾದ ಅಮಿತ್ ಶಾ, ಇಂದು ಕಾಶ್ಮೀರದ ಮೂರನೇ ಒಂದು ಭಾಗ ನಮ್ಮ ಬಳಿ ಇಲ್ಲ. ಇದಕ್ಕೆ ಕಾರಣ ಯಾರು?. ಭಾರತೀಯ ಸೇನೆ ಪಾಕಿಸ್ತಾನದ ಸೈನ್ಯವನ್ನು ಒಂದು ಮೂಲೆಗೆ ತಳ್ಳಿದಾಗ ಜವಾಹರಲಾಲ್ ನೆಹರು ಕದನ ವಿರಾಮ ಘೋಷಿಸಿದರು. ಇಲ್ಲದಿದ್ದರೆ ಇಡೀ ಕಾಶ್ಮೀರ ನಮ್ಮದಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಜವಾಹರ್ಲಾಲ್ ಹೆಸರನ್ನು ಬಳಸಿದ್ದಕ್ಕೆ ಕಾಂಗ್ರೆಸ್ ಸಂಸದರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಶಾ, ಸರಿ ಅವರ ಹೆಸರು ಬಳಸುವುದು ನೋವುಂಟಾಗುತ್ತದೆ. ಅದರ ಬದಲು ನಾನು ದೇಶದ ಮೊದಲ ಪ್ರಧಾನಿ ಎಂದು ಬಳಸುತ್ತೇನೆ ಎಂದರು.
Comments are closed.