
ನವದೆಹಲಿ(ಜೂನ್.20): ಲೋಕಸಭಾ ಚುನಾವಣೆಯಲ್ಲಿ ಅವಮಾನಕರ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯಲು ಬಯಸುವುದಿಲ್ಲ ಎಂದ ರಾಹುಲ್ ಗಾಂಧಿ ರಾಜೀನಾಮೆಗೆ ಮುಂದಾಗಿದ್ದರು. ಈ ಬೆನ್ನಲ್ಲೇ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು, ತನ್ನ ರಾಜೀನಾಮೆ ಪ್ರಸ್ತಾಪ ತಿರಸ್ಕರಿಸಿದರು. ಜತೆಗೆ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಸೂಕ್ತ ಅಭ್ಯರ್ಥಿಯಿಲ್ಲ. ಹೀಗಾಗಿ ಬದಲಾವಣೆ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ರಾಹುಲ್ ರಾಜೀನಾಮೆ ಚರ್ಚೆಗೆ ತೆರೆ ಎಳೆದರು.
ಈ ಮಧ್ಯೆ ಮುಂದಿನ ಕಾಂಗ್ರೆಸ್ ಅಧ್ಯಕ್ಷ ಯಾರಾಗಬೇಕು? ಎನ್ನುವುದು ನಾನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದ್ದಾರೆ ರಾಹುಲ್. ಹಾಗೆಯೇ ಯಾರು ಬೇಕಾದರೂ ಪಕ್ಷದ ಅಧ್ಯಕ್ಷರು ಆಗಬಹುದು. ಈ ವಿಚಾರಕ್ಕೆ ನಾನು ತಲೆ ಹಾಕುವುದಿಲ್ಲ ಎನ್ನುವ ಮುಖೇನ ರಾಹುಲ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸದ್ಯದಲ್ಲೇ ತಾವು ಅಧ್ಯಕ್ಷ ಸ್ಥಾನ ತ್ಯಜಿಸುವ ಎಲ್ಲಾ ರೀತಿಯ ಲಕ್ಷಣಗಳ ಗೋಚರಿಸುತ್ತಿವೆ.
ಇನ್ನು ರಾಹುಲ್ ಗಾಂಧಿಯವರು, ಕಾಂಗ್ರೆಸ್ ಪಕ್ಷದ ಲೋಕಸಭಾ ನಾಯಕನಾಗಿ ಆಯ್ಕೆಯಾಗಲು ಹಿಂದೇಟು ಹಾಕಿದ್ದರು. ಕಾಂಗ್ರೆಸ್ ಅಧ್ಯಕ್ಷರು ಈ ಹುದ್ದೆಯನ್ನು ಒಪ್ಪದ ಕಾರಣ, ಪಕ್ಷ ಅಧೀರ್ ರಂಜನ್ ಚೌಧುರಿ ಅವರನ್ನು ನೇಮಿಸಿದೆ. ಚೌಧುರಿ ಪಶ್ಚಿಮ ಬಂಗಾಳದಿಂದ ಕಾಂಗ್ರೆಸ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನ ಹೊಣೆಯನ್ನು ವಹಿಸಲಾಗಿದೆ. ಪಕ್ಷದ ಸಾಲಿನಲ್ಲಿ ಮುಂದೆ ನಿಲ್ಲುವಂತೆ ಸೂಚಿಸಲಾಗಿದೆ.
ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷದಲ್ಲಿ ನಾನೊಬ್ಬ ಕಾಲಾಳು ಸೈನಿಕನಾಗಿದ್ದೇನೆ. ಯೋಧ ಯಾವಾಗಲೂ ಮುಂದೆ ನಿಂತು ಯುದ್ಧ ಮಾಡಬೇಕಿದೆ. ನನ್ನ ಕೆಲಸವನ್ನು ನಾನು ಗೌರವದಿಂದ ಮಾಡುತ್ತೇನೆ ಎಂದು ಚೌಧುರಿ ಪ್ರತಿಕ್ರಿಯಿಸಿದ್ದಾರೆ.
ಚುನಾವಣಾ ಸೋಲಿನ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ, ಪಕ್ಷದ ವರಿಷ್ಠರು ಚುನಾವಣೆಯಲ್ಲಿ ಸೋಲು- ಗೆಲುವು ಸಾಮಾನ್ಯ. ತನ್ನ ರಾಜಕಾರಣದ ಯಾತ್ರೆಯಲ್ಲಿ ಕಾಂಗ್ರೆಸ್ ಬಹಳಷ್ಟು ಕಠಿಣ ಸಂದರ್ಭಗಳನ್ನು ಎದುರಿಸಿದೆ. ಎಲ್ಲವನ್ನು ದಾಟಿ ಮುಂದುವರಿಯಲು ಪಕ್ಷ ಸಫಲವಾಗಿದೆ ಎಂದು ರಾಜೀನಾಮೆ ಪ್ರಸ್ತಾಪ ತಳ್ಳಿ ಹಾಕಿದೆ.
Comments are closed.