ರಾಷ್ಟ್ರೀಯ

1990ರ ಕಸ್ಟಡಿಯಲ್ಲಿದ್ದ ವ್ಯಕ್ತಿಯ ಸಾವು ಪ್ರಕರಣ: ಐಪಿಎಸ್ ಸಂಜೀವ್ ಭಟ್‌ಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

ಹೊಸದಿಲ್ಲಿ: 30 ವರ್ಷಗಳ ಹಿಂದೆ ನಡೆದ ಕಸ್ಟಡಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚಾಟಿತ ಐಪಿಎಸ್ ಅಧಿಕಾರಿ ಸಂಜೀವ್ ಭಟ್‌ ಅವರಿಗೆ ಗುಜರಾತ್‌ ಕೋರ್ಟ್‌ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಸಂಜೀವ್ ಭಟ್ 1990ರಲ್ಲಿ ಜಾಮ್‌ನಗರ ಜಿಲ್ಲಾ ಹೆಚ್ಚುವರಿ ಎಸ್‌ಪಿಯಾಗಿ ನೇಮಕಗೊಂಡಿದ್ದ ಅವಧಿಯಲ್ಲಿ ಈ ಪ್ರಕರಣ ನಡೆದಿತ್ತು.

ಕೋಮು ಗಲಭೆಯೊಂದಕ್ಕೆ ಸಂಬಂಧಿಸಿದಂತೆ ಸಂಜೀವ್ ಭಟ್‌ 100ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆ ಸಂದರ್ಭ ಒಬ್ಬ ವಿಚಾರಣಾಧೀನ ಕೈದಿ ಅವರ ವಶದಿಂದ ಬಿಡುಗಡೆಯಾದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಎಂದು ಪ್ರಾಸಿಕ್ಯೂಷನ್ ಹೇಳಿದೆ.

ಪ್ರಕರಣದಲ್ಲಿ 11 ಮಂದಿ ಹೆಚ್ಚುವರಿ ಸಾಕ್ಷಿಗಳನ್ನು ಪರಿಶೀಲಿಸುವಂತೆ ಭಟ್ ಮಾಡಿದ ಮನವಿಯನ್ನು ಸುಪ್ರೀಂ ಕೋರ್ಟ್ ಜೂನ್ 12ರಂದು ತಿರಸ್ಕರಿಸಿತ್ತು.

ಪ್ರಕರಣದ ತೀರ್ಪನ್ನು ಮತ್ತಷ್ಟು ವಿಳಂಬಗೊಳಿಸಲು ನಡೆಸುತ್ತಿರುವ ತಂತ್ರಗಾರಿಕೆಯ ನಡೆ ಇದು ಎಂದು ಗುಜರಾತ್ ಪೊಲೀಸರು ಸುಪ್ರೀಂ ಕೋರ್ಟಿನ ರಜಾಕಾಲದ ಪೀಠದ ಎದುರು ವಾದಿಸಿ, ಸಂಜೀವ್ ಭಟ್ ಕೋರಿಕೆಯನ್ನು ವಿರೋಧಿಸಿದ್ದರು.

ಅನುಮತಿಯಿಲ್ಲದೆ ಕರ್ತವ್ಯಕ್ಕೆ ಗೈರುಹಾಜರಾದ ಹಾಗೂ ಅಧಿಕೃತ ವಾಹನಗಳ ದುರ್ಬಳಕೆ ಆರೋಪದಲ್ಲಿ 2011ರಲ್ಲಿ ಸಂಜೀವ್ ಭಟ್ ಅವರನ್ನು ಅಮಾನತುಗೊಳಿಸಲಾಗಿತ್ತು. ಬಳಿಕ 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು.

Comments are closed.