
ನವದೆಹಲಿ (ಜೂ.19): ದೆಹಲಿಯ ಹೊರವಲಯದಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿಯನ್ನು ನಿನ್ನೆ ರಾತ್ರಿ ನಗರದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ತಮ್ಮ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಸೇವೆಯ ಅವಧಿ ಮುಗಿದುಹೋಗಿದೆ, ಬೇರೆ ಆಸ್ಪತ್ರೆಗೆ ಕರೆದುಕೊಂಡುಹೋಗಿ ಎಂದು ಹೇಳಿದ ವೈದ್ಯರ ಮೇಲೆ ಕೋಪಗೊಂಡ ಜನರು ಗಲಾಟೆಯೆಬ್ಬಿಸಿ, ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದಾರೆ.
6 ವರ್ಷದ ಬಾಲಕಿಯ ಮೇಲೆ ನಿನ್ನೆ ಅತ್ಯಾಚಾರವೆಸಗಿರುವ ವಿಷಯ ತಿಳಿಯುತ್ತಿದ್ದಂತೆ ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಅದಕ್ಕೆ ವೈದ್ಯರು ಸಹಕರಿಸದ ಕಾರಣ ಬಾಲಕಿಯ ಸಂಬಂಧಿಕರು ಆಸ್ಪತ್ರೆಯ ಪೀಠೋಪಕರಣಗಳು, ಕುರ್ಚಿಗಳನ್ನು ಧ್ವಂಸಗೊಳಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ತಮ್ಮ ಆಸ್ಪತ್ರೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ತಪಾಸಣೆಗೆ ಬೇಕಾದ ಸೌಲಭ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಮಹರ್ಷಿ ವಾಲ್ಮೀಕಿ ಆಸ್ಪತ್ರೆಯ ಹಿರಿಯ ವೈದ್ಯ ರಾಜೀವ್ ಸಾಗರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಿಯಮದ ಪ್ರಕಾರ ನಾವು ಅತ್ಯಾಚಾರಕ್ಕೊಳಗಾದ ಮಗುವನ್ನು ತಪಾಸಣೆ ನಡೆಸಿದ್ದೇವೆ. ಆದರೆ, ವಿವರವಾದ ವೈದ್ಯಕೀಯ ತಪಾಸಣೆ ಮಾಡಲು ಬೇಕಾದ ಸೌಲಭ್ಯಗಳು ಇಲ್ಲದ ಕಾರಣ ಆಕೆಯನ್ನು ಬೇರೆ ಆಸ್ಪತ್ರೆಗೆ ಸೇರಿಸುವಂತೆ ಹೇಳಿದೆವು. 4 ಗಂಟೆಯ ನಂತರ ನಮ್ಮ ಆಸ್ಪತ್ರೆಯ ತುರ್ತು ಸೇವಾ ಘಟಕ ಮುಚ್ಚುತ್ತದೆ. ಈ ವಿಷಯವನ್ನು ಹೇಳಿದ್ದಕ್ಕೆ ಬಾಲಕಿಯ ಸಂಬಂಧಿಕರು ಗಲಾಟೆಯೆಬ್ಬಿಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು ಎಂದು ಹೇಳಿದ್ದಾರೆ.
ಬಾಲಕಿಯ ನೆರೆಯ ಮನೆಯವನೇ ಅತ್ಯಾಚಾರವೆಸಗಿದ್ದಾಗಿ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯ ಸಂಬಂಧಿಕರು ಮತ್ತು ವೈದ್ಯರ ನಡುವೆ ಉಂಟಾದ ಗೊಂದಲದಿಂದ ಗಲಾಟೆಯೆದ್ದಿದೆ. ವೈದ್ಯಕೀಯ ವರದಿ ಬಂದ ನಂತರ ಆಕೆಯ ಮೇಲೆ ಅತ್ಯಾಚಾರ ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಂಡು ಆರೋಪಿಯನ್ನು ಬಂಧಿಸಲಿದ್ದೇವೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
Comments are closed.