ರಾಷ್ಟ್ರೀಯ

ಮಮತಾ ಬ್ಯಾನರ್ಜಿಯನ್ನು ಭೇಟಿ ಮಾಡಲಿರುವ ಮುಷ್ಕರ ನಿರತ ವೈದ್ಯರು

Pinterest LinkedIn Tumblr

ಕೋಲ್ಕತಾ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿರುವ ಕಿರಿಯ ವೈದ್ಯರಿಗೆ ಪಶ್ಚಿಮ ಬಂಗಾಳ ಸರ್ಕಾರ ಸೋಮವಾರ ಅಧಿಕೃತವಾಗಿ ಮಾತುಕತೆ ಆಹ್ವಾನ ಪತ್ರ ನೀಡಿದ್ದು, ಮುಷ್ಕರ ನಿರತ ವೈದ್ಯರು ಇಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಕಚೇರಿಯಲ್ಲಿ ಪ್ರತಿ ವೈದ್ಯಕೀಯ ಕಾಲೇಜ್ ನಿಂದ ತಲಾ ಇಬ್ಬರು ಪ್ರತಿನಿಧಿಗಳನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಪಿಕೆ ಮಿತ್ರಾ ಅವರು ತಿಳಿಸಿದ್ದಾರೆ.

ವೈದ್ಯರ ಪ್ರತಿನಿಧಿಗಳ ಸಭೆಯಲ್ಲಿ ಅವರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಕುರಿತು ಚರ್ಚಿಸಲಾಗುವುದು ಮತ್ತು ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳನ್ನು ರೆಕಾರ್ಡ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಕಳೆದ ಶನಿವಾರ ಸಹ ಸಿಎಂ ಮಮತಾ ಬ್ಯಾನರ್ಜಿ ಅವರು ವೈದ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಆಹ್ವಾನವನ್ನು ತಿರಸ್ಕರಿಸಿದ್ದ ವೈದ್ಯರು, ಗಾಯಾಳು ವೈದ್ಯರನ್ನು ಭೇಟಿ ಮಾಡುವಂತೆ ಒತ್ತಾಯಿಸಿದ್ದಾರೆ. ಇದೀಗ ಸಿಎಂ ಜೊತೆಗೆ ಮಾತುಕತೆಗೆ ವೈದ್ಯರು ಮುಂದಾಗಿದ್ದು, ವೈದ್ಯರ ಜೊತೆಗಿನ ಸಭೆ ಯಶಸ್ವಿಯಾಗಿ, ಮುಷ್ಕರ ಹಿಂಪಡೆಯುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.

Comments are closed.