ಸೂರತ್: ಇಲ್ಲಿನ 12 ವರ್ಷದ ಬಾಲಕಿ ಜೈನ ಸಂನ್ಯಾಸಿನಿಯಾಗಲು ನಿರ್ಧರಿಸಿದ್ದು, ಆಕೆಯ ನಿರ್ಧಾರಕ್ಕೆ ಮನೆಯವರು ಬೆಂಬಲವಾಗಿ ನಿಂತಿದ್ದಾರೆ.
ಖುಷಿ ಶಾ ಎಂಬ ಬಾಲಕಿಯೇ ಜೈನ ಸಂನ್ಯಾಸಿನಿ ಆಗಲು ನಿರ್ಧರಿಸಿದವರು. ಖುಷಿ ಕುಟುಂಬದಲ್ಲಿ ಜೈನ ಸಂನ್ಯಾಸತ್ವ ಸ್ವೀಕರಿಸುತ್ತಿರುವುದು ಇವರೇ ಮೊದಲೇನಲ್ಲ. “ನಾನು ಚಿಕ್ಕವಳಿದ್ದಾಗ ನಮ್ಮ ಕುಟುಂಬದ ನಾಲ್ವರು ಸಂನ್ಯಾಸತ್ವದ ಹಾದಿ ತುಳಿದಿದ್ದರು. ಸಿಮಂದರ್ ಸ್ವಾಮೀಜಿ ತಮ್ಮ ಎಂಟನೇ ವಯಸ್ಸಿನಲ್ಲಿ ಸಂನ್ಯಾಸತ್ವ ದೀಕ್ಷೆ ಸ್ವೀಕರಿಸಿದ್ದರು. ನಾನು 12ನೇ ವಯಸ್ಸಿನಲ್ಲಿ ದೀಕ್ಷೆ ಪಡೆಯುತ್ತೇನೆ,” ಎಂದು ಅವರು ಹೇಳುತ್ತಾರೆ.
ಸರ್ಕಾರಿ ಉದ್ಯೋಗಿಯಾಗಿರುವ ಖುಷಿ ತಂದೆ ವಿನಿತ್ ಶಾ, ಎಳೆಯ ವಯಸ್ಸಿನಲ್ಲಿ ಆಕೆ ಆಂತರ್ಯ ಅರಿತುಕೊಂಡಿದ್ದಾಳೆ. ಮತ್ತು ಇದು ಎಲ್ಲ ಮಕ್ಕಳಲ್ಲಿ ಬರುವುದಿಲ್ಲ. ಇದು ನಮಗೆ ಹೆಮ್ಮೆಯ ವಿಷಯ. ಆಕೆ ಸಂನ್ಯಾಸಿಯಾಗಿ ಲಕ್ಷಾಂತರ ಜನರ ಬದುಕಿನಲ್ಲಿ ಬೆಳಕು ತರಲಿ ಎಂದು ಮಗಳ ನಿರ್ಧಾರಕ್ಕೆ ಶುಭ ಹಾರೈಸಿದರು.
ಕಳೆದ ವರ್ಷ ನವೆಂಬರ್ನಲ್ಲಿ ಆಕೆ ಆರನೇ ತರಗತಿಗೆ ಶಾಲೆ ಬಿಟ್ಟಿದ್ದಾಳೆ. ಆರನೇ ತರಗತಿಯಲ್ಲಿ 97 ಅಂಕ ಪಡೆದಿದ್ದಾಳೆ. ಈಗಾಗಲೇ ಆಕೆ ಬರಿಗಾಲಲ್ಲಿ ಸಾವಿರಾರು ಕಿ.ಮೀ ಪ್ರವಾಸ ಮಾಡಿದ್ದಾಳೆ. ದೀಕ್ಷೆಯ ನಂತರ ಜೀವನವನ್ನು ಮತ್ತಷ್ಟು ಹತ್ತಿರದಲ್ಲಿ ನೋಡಲಿದ್ದಾಳೆ ಎಂದು ತಂದೆ ಹೇಳುತ್ತಾರೆ.
ಆಕೆ ಡಾಕ್ಟರ್ ಆಗಬೇಕು ಎಂದು ನಾನು ಬಯಸಿದ್ದೆ. ಆದರೆ, ನಂತರ ನಾವು ಆಕೆ ದೀಕ್ಷೆ ತೆಗೆದುಕೊಳ್ಳುವುದಕ್ಕೆ ಒಪ್ಪಿಗೆ ನೀಡಿದೆವು. ಆಕೆಯ ಆಸೆಯನ್ನು ಪೂರೈಸುವುದು ನಮ್ಮ ಕರ್ತವ್ಯ. ಆಕೆಯ ನಿರ್ಧಾರ ನಮಗೆ ಹೆಮ್ಮೆ ಇದೆ ಎಂದು ಖುಷಿ ತಾಯಿ ಹೇಳುತ್ತಾರೆ.
ಜೈನ ಸಂನ್ಯಾಸತ್ವ ದೀಕ್ಷೆ ಅದೊಂದು ಬರೀ ಪ್ರಕ್ರಿಯೆ ಅಷ್ಟೇ ಅಲ್ಲ. ಅಲ್ಲಿನ ಕಠಿಣ ವ್ರತಗಳನ್ನು ನಿರ್ವಹಿಸಬೇಕಿರುತ್ತದೆ. ದೀಕ್ಷೆ ನೀಡುವ ಕೆಸಾ ಲೋಕಾ ಸಮಯದಲ್ಲಿ ದೇಹದ ಮೇಲಿನ ವ್ಯಾಮೋಹ ಕಳೆದುಕೊಳ್ಳಲು ತಲೆ ಕೂದಲನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಹೊಸ ಸಂನ್ಯಾಸಿಗಳು ಮಹಾವ್ರತ ಹೆಸರಿನ ಐದು ಪ್ರತಿಜ್ಞೆಗಳನ್ನು ಪಾಲಿಸಬೇಕಾಗಿರುತ್ತದೆ. ಇದರಲ್ಲಿ ಪ್ರತಿದಿನ ಕ್ರಿಯಾದಿಗಳು ಒಳಗೊಂಡಿರುತ್ತವೆ. ನಂತರ ಎಂಟು ಸಿದ್ಧಾಂತಗಳನ್ನು (ಪ್ರವಚನ ಮಾತ್ರಕ್) ಅಭ್ಯಸಿಸಬೇಕು. ಮತ್ತು ಆರು ಕಡ್ಡಾಯ ಕ್ರಿಯೆಗಳನ್ನು (ಅವಸ್ಯಾಕ್) ಪಾಲಿಸಬೇಕು.