ರಾಷ್ಟ್ರೀಯ

ಕೇಂದ್ರದಲ್ಲಿ ನೂತನ ಸಂಪುಟ ರಚನೆಗೆ ನಡೆಯುತ್ತಿದೆ ಕಸರತ್ತು; ಮೋದಿ-ಶಾ ಮಹತ್ವದ ಸಭೆ: ಯಾರಿಗೆ ಸಿಗಲಿದೆ ಸಚಿವಗಿರಿಯ ಭಾಗ್ಯ ?

Pinterest LinkedIn Tumblr

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ಮತ್ತು ಎನ್ ಡಿಎ ಮೈತ್ರಿಕೂಟ ಈಗಾಗಲೇ ಸರ್ಕಾರ ರಚನೆ ಕಸರತ್ತು ಆರಂಭಿಸಿದ್ದು, ದೆಹಲಿಯಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಹಾಗೂ ನೂತನ ಸಂಸದ ಅಮಿತ್ ಶಾ ಸಂಪುಟ ರಚನೆ ಕುರಿತಂತೆ ಮಹತ್ವದ ಸಭೆ ನಡೆಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ನರೇಂದ್ರ ಮೋದಿ ನಾಳೆ ಮತ್ತೊಮ್ಮೆ, ಎರಡನೇ ಅವಧಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದು ಇದಕ್ಕಾಗಿ ದೆಹಲಿ, ರಾಷ್ಟ್ರಪತಿಭವನ ಎರಡೂ ಸಜ್ಜಾಗಿವೆ. ನಾಳೆ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಹೀಗಾಗಿ ನಾಳೆಯ ಹೊತ್ತಿಗೆ ಬಹುತೇಕ ಸಂಪುಟ ರಚನೆ ಕಸರತ್ತು ಕೂಡ ಮುಕ್ತಾಯವಾಗಲಿದ್ದು, ಇದರ ನಿಮಿತ್ತ ನಿನ್ನೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ತಂಡ ಮ್ಯಾರಥಾನ್ ಸಭೆ ನಡೆಸಿದೆ.

ನೂತನ ಸಚಿವರಾಗುವವರಿಗೆ ದೂರವಾಣಿ ಕರೆ ಮಾಡಿ ಆಹ್ವಾನ ಮಾಡಲಿರುವ ಮೋದಿ!
ಈ ಮಧ್ಯೆ ಸಚಿವ ಸಂಪುಟಕ್ಕೆ ಯಾರನ್ನು ನೇಮಕ ಮಾಡಿಕೊಳ್ಳಬೇಕು, ಯಾವ ರಾಜ್ಯಕ್ಕೆ ಆದ್ಯತೆ ಕೊಡಬೇಕು ಎಂಬುದರ ಬಗ್ಗೆ ನಿನ್ನೆ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುಮಾರು ನಾಲ್ಕು ತಾಸುಗಳ ಕಾಲ ಚರ್ಚೆ ಮಾಡಿ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಈ ನಡುವೆ ನಾಳೆ ನೂತನ ಸಚಿವರಾಗುವವರಿಗೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರೇ ದೂರವಾಣಿ ಕರೆ ಮಾಡಿ ಆಹ್ವಾನ ನೀಡುತ್ತಾರೆ ಎಂದು ಹೇಳಲಾಗಿದೆ.

ಸಂಪುಟಕ್ಕೆ ಶಾ ಸೇರ್ಪಡೆಯಾಗುವ  ಅಮಿತ್ ಷಾಗೆ ಪ್ರಮುಖ ಜವಾಬ್ದಾರಿ 
ಇನ್ನುಬಿಜೆಪಿ ಅಧ್ಯಕ್ಷ ಅಮಿತ್ ಷಾ ಅಧಿಕಾರಾವಧಿ ಜುಲೈಗೆ ಪೂರ್ಣಗೊಳ್ಳುತ್ತಿರುವುದು ಒಂದೆಡೆಯಾದರೆ, ಅವರು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗುತ್ತಿದೆ. ಕಳೆದ ಸರ್ಕಾರದಲ್ಲಿನ ಹಲವು ಯೋಜನೆಗಳ ತ್ವರಿತಗತಿ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಎನ್​ಡಿಎ-2ರಲ್ಲಿ ಅಮಿತ್ ಷಾಗೆ ಪ್ರಮುಖ ಜವಾಬ್ದಾರಿ ಹೊರಿಸಬೇಕೆನ್ನುವುದು ಮೋದಿ ಲೆಕ್ಕಾಚಾರ ಎನ್ನಲಾಗಿದೆ. ಹೀಗಾಗಿ ಅಮಿತ್ ಶಾಗೆ ಹಣಕಾಸು ಅಥವಾ ಗೃಹ ಇಲಾಖೆ ಹೊಣೆಗಾರಿಕೆ ಸಿಗಬಹುದೆಂದು ರಾಜಕೀಯ ತಜ್ಞರು ಲೆಕ್ಕಾಚಾರ ಹಾಕಿದ್ದಾರೆ.

ಇದೇ ವಿಚಾರವಾಗಿ ಅಮಿತ್ ಶಾ ಅವರೂ ಕೂಡ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಅವರಿಂದಲೂ ಶಾ ಸಂಪುಟ ಸೇರ್ಪಡೆ ಕುರಿತಂತೆ ಸಕಾರಾತ್ಮಕ ಅಭಿಪ್ರಾಯವ್ಯಕ್ತವಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಬಾರಿ ಸಂಪುಟದಲ್ಲಿ ಬಂಗಾಳ, ಒಡಿಶಾ ಮತ್ತು ಬಿಹಾರದ ಎನ್​ಡಿಎ ಮೈತ್ರಿಪಕ್ಷ ಜೆಡಿಯುಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುವ ಸಂಭವವಿದೆ. ಈ ರಾಜ್ಯಗಳಲ್ಲಿ ಹೊಸದಾಗಿ ಆಯ್ಕೆಯಾಗಿರುವ ಕೆಲವು ಸಂಸದರಿಗೆ ರಾಜ್ಯ ಸಚಿವ ಸ್ಥಾನದ ಭಾಗ್ಯ ಲಭಿಸಲಿದೆ. ಜೆಡಿಯುಗೆ 2 ಮಂತ್ರಿ ಸ್ಥಾನ, ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಎಲ್​ಜೆಪಿಗೆ 1 ಮತ್ತು ಬಿಹಾರ ಬಿಜೆಪಿಗೆ 3 ಸಚಿವ ಸ್ಥಾನ ನೀಡಬಹುದು ಎನ್ನಲಾಗಿದೆ.

ಅಂತೆಯೇ ಕಾಂಗ್ರೆಸ್ ಭದ್ರಕೋಟೆ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನೇ ಮಣಿಸಿದ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಎನ್ ಡಿಎ-2ನಲ್ಲೂ ಮುಂದುವರೆಯುವ ಸಾಧ್ಯತೆ ಇದ್ದು, ಅವರಿಗೆ ಈ ಭಾರಿ ಪ್ರಮುಖ ಹುದ್ದೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜನಾಥ ಸಿಂಗ್ ಮತ್ತು ನಿರ್ಮಲಾ ಸೀತಾರಾಮನ್, ಪಿಯೂಷ್ ಗೋಯೆಲ್, ಮುಖ್ತಾರ್ ಅಬ್ಬಾಸ್ ನಖ್ವಿ ಪ್ರಮುಖ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ. ರಾಜ್ಯಸಭೆ ಸದಸ್ಯ ಭೂಪಿಂದರ್ ಸಿಂಗ್ ಯಾದವ್ ಕೂಡ ಸಂಪುಟ ಸೇರ್ಪಡೆಯಾಗಬಹುದು. ಆದರೆ ವಿದೇಶಾಂಗ ಇಲಾಖೆಯ ಜವಾಬ್ದಾರಿ ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ ಸುಷ್ಮಾ ಸ್ವರಾಜ್ ಮತ್ತು ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಎನ್ ಡಿಎ-2ನ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಇಬ್ಬರೂ ನಾಯಕರೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಅವರು ಸಂಪುಟದಿಂದ ತಪ್ಪಿಸಿಕೊಳ್ಳುವ ಸಾದ್ಯತೆ ಇದೆ.

Comments are closed.